ಪಟನಾ: ಚಿನ್ನಾಭರಣ ಮಳಿಗೆಯಲ್ಲಿ ದರೋಡೆಕೋರರು ಏಕಾಏಕಿ ನುಗ್ಗಿ ಮಾಲೀಕನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಘಟನೆ ನಡೆದಿರುವುದು ಬಿಹಾರದ ಹಾಜಿಪುರ್ ನಗರದ ಹೃದಯಭಾಗದಲ್ಲಿ. ಅದೂ ಹೆಚ್ಚು ಜನನಿಬಿಡ ಪ್ರದೇಶದಲ್ಲಿ ಮಳಿಗೆಯಲ್ಲೇ ದರೋಡೆಕೋರರು ಮಾಡಿರುವ ಕೃತ್ಯ ಬೆಚ್ಚಿ ಬೀಳಿಸುವಂತಿದೆ.
ಎಂದಿನಂತೆ ಅಂಗಡಿ ತೆರೆದಿತ್ತು, ಗ್ರಾಹಕರು ಕೂಡ ಖರೀದಿಗಾಗಿ ಬಂದಿದ್ದರು, ನಂತರ ಒಬ್ಬೊಬ್ಬರೇ ಅಂಗಡಿಯೊಳಗೆ ನುಸುಳುತ್ತಾರೆ. ಬಂದವರೇ ಗ್ರಾಹಕರಿಗೂ ಥಳಿಸಿ, ಮಾಲೀಕರನ್ನೂ ಥಳಿಸುತ್ತಾರೆ. ಅಂಗಡಿಯಲ್ಲೇ ಇದ್ದ ಮಹಿಳೆಯೊಬ್ಬಳು ಭಯಭೀತಗೊಂಡು, ತನ್ನೆರಡೂ ಮಕ್ಕಳನ್ನು ಎದೆಗವಚಿಕೊಳ್ಳುತ್ತಾಳೆ. ಇನ್ನೊಂದು ಕಡೆ ಕುಳಿತಿದ್ದ ಗ್ರಾಹಕರನ್ನು ದರೊಡೆಕೋರರು ಥಳಿಸುತ್ತಾರೆ. ಈ ಘಟನೆ ಜೂನ್ 22 ರ ರಾತ್ರಿ 8 ಗಂಟೆಯಲ್ಲಿ ನಡೆದಿದೆ.
ಅಂಗಡಿ ಮಾಲೀಕ ಸುನಿಲ್ ಪ್ರಿಯದರ್ಶಿ ಅವರನ್ನು ಥಳಿಸಿ, ನಂತರ ಬಂದೂಕಿನಿಂದ ಗುಂಡು ಹಾರಿಸಿ ಹತ್ಯೆಗೈದು ಅಂಗಡಿಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಸದ್ಯ ಈ ಬಗ್ಗೆ ಅಲ್ಲಿನ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದು, ದರೋಡೆಕೋರರ ಪತ್ತೆಗಾಗಿ ಬೆನ್ನಟ್ಟಿದೆ. (ಏಜೆನ್ಸೀಸ್)