ಕಲಬುರಗಿ: ಬೀದರ್, ಕಲಬುರಗಿ, ಯಾದಗಿರಿ ಸೇರಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಭಾನುವಾರ ಎಳ್ಳ ಅಮಾವಾಸ್ಯೆಯನ್ನು ಶ್ರದ್ಧಾಭಕ್ತಿಯೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು.
ರೈತರು ಕುಟುಂಬ ಸಮೇತ ಹೊಲಕ್ಕೆ ತೆರಳಿ ಬೆಳೆಗಳಿಗೆ ಹಾಗೂ ಭೂತಾಯಿಗೆ ಪೂಜೆ ಸಲ್ಲಿಸಿದರು. ಹೊಲದ ಸುತ್ತ ಪ್ರದಕ್ಷಿಣೆ ಹಾಕಿ ಚರಗ (ಅಂಬಲಿ ಹಾಗೂ ನೀರು ಜೋಳದ ಎಲೆಯಿಂದ ಬೆಳೆಗಳಿಗೆ) ಚೆಲ್ಲಿ ಸಾಂಪ್ರದಾಯಿಕ ವೈಶಿಷ್ಟ್ಯ ಮೆರೆದರು.
ಎಳ್ಳ ಅಮಾವಾಸ್ಯೆ ವಿಶೇಷವಾದ ಭಜ್ಜಿ ಪಲ್ಯ, ಅಂಬಲಿ, ಜೋಳ-ಸಜ್ಜೆಯ ಕಡಕ್ ರೊಟ್ಟಿ, ಶೇಂಗಾ ಹಿಂಡಿ, ಕರ್ಜೆಕಾಯಿ, ಬದನೆಕಾಯಿ ಭರ್ತಾ, ಒಗ್ಗರಣೆ ಇತರೆ ದೇಸಿ ಊಟದ ಭರ್ಜರಿ ಭೋಜನ ಮಾಡಿದರು. ಬಂಧು- ಮಿತ್ರರಿಗೂ ಆಹ್ವಾನಿಸಿ ಸಾಮೂಹಿವಾಗಿ ಊಟದ ರುಚಿ ಸವಿದರು. ಕಬ್ಬಡಿ, ಗಿಲ್ಲಿ ದಾಂಡು, ಜೋಕಾಲಿ ಇತರ ದೇಸಿ ಆಟಗಳಲ್ಲಿ ಮಿಂದೆದ್ದರು.
ಬಹುತೇಕರು ಹಳ್ಳಿ, ಹೊಲಗಳತ್ತ ಮುಖ ಮಾಡಿದ ಕಾರಣ ನಗರ ಹಾಗೂ ಪಟ್ಟಣ ಪ್ರದೇಶಗಳು ಬಿಕೋ ಎನ್ನುತ್ತಿದ್ದವು. ಹಬ್ಬವು ಭಾನುವಾರ ಬಂದ ಕಾರಣ ಸರ್ಕಾರಿ, ಅಧಿಕಾರಿಗಳು, ಸಿಬ್ಬಂದಿ ಸಹ ಕುಟುಂಬ ಸಮೇತ ತಮ್ಮ ಹಾಗೂ ಆಪ್ತರ ಹೊಲಗಳಿಗೆ ತೆರಳಿ ಹಬ್ಬದ ಖುಷಿಯಲ್ಲಿ ಭಾಗಿಯಾದರು.