ಬೆಂಗಳೂರು: ಆನೆಯೊಂದು ಅಡುಗೆ ಮನೆಯ ಕಿಟಕಿ ಮುರಿದು ಆಹಾರವನ್ನ ಹೇಗೆ ಲೂಟಿ ಮಾಡ್ತಿದೆ ನೋಡಿ. ಕಿಟಕಿಯೊಳಗೆ ಸೊಂಡಿಲು ಹಾಕಿ ಸಿಕ್ಕಿದ್ದೆಲ್ಲವನ್ನೂ ಹಾನಿ ಮಾಡುತ್ತಾ, ಆಹಾರ ಸಾಮಗ್ರಿಯನ್ನ ಬಾಯೊಳಗೆ ಹಾಕಿಕೊಳ್ಳುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.
ಅಡುಗೆ ಮನೆಯ ಕಿಟಕಿಯನ್ನು ಧ್ವಂಸ ಮಾಡಿ, ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡುತ್ತಿರುವ ಆನೆಯನ್ನ ನೋಡಿ ಆ ಮನೆಯಲ್ಲಿದ್ದವರು ಭಯಗೊಂಡಿದ್ದಾರೆ. ಮನೆಯಿಂದ ಹೊರಗೂ ಬರಲಾಗದೆ, ಒಳಗೂ ಇರಲಾರದೆ ಜೀವಭಯದಲ್ಲೇ ಆನೆಯನ್ನು ಓಡಿಸಲು ಹರಸಾಹಸಪಟ್ಟಿದ್ದಾರೆ. ತಟ್ಟೆಯನ್ನ ಬಡಿದು ಶಬ್ದ ಮಾಡುತ್ತಾ ಆನೆಯನ್ನ ಓಡಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಈ ದೃಶ್ಯವನ್ನ ಮನೆಯಲ್ಲಿದ್ದವರೇ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಅಂದಹಾಗೆ ಇದು ಎಲ್ಲಿ ನಡೆದ ಘಟನೆ ಎಂಬ ಖಚಿತ ಮಾಹಿತಿ ಸಿಕ್ಕಿಲ್ಲ. ಹಾಸನದಲ್ಲಿ ಕೆಲವರು ಈ ವಿಡಿಯೋವನ್ನ ವಾಟ್ಸ್ಆ್ಯಪ್ ಸ್ಟೇಟಸ್ಗೆ ಹಾಕಿಕೊಂಡು 'ಜಿಲ್ಲೆಯಲ್ಲಿ ಆನೆ ಹಾವಳಿ ಯಾವ ಮಟ್ಟಕ್ಕೆ ಬಂದಿದೆ ನೋಡಿ..' ಎಂದು ಬರೆದುಕೊಂಡಿದ್ದಾರೆ. ಆದರೆ, ಹಾಸನ ಅರಣ್ಯಾಧಿಕಾರಿಗಳು ನಮ್ಮ ಜಿಲ್ಲೆಯಲ್ಲಿ ಈ ಘಟನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.