ನ್ಯೂಸ್

ಸಿದ್ದು ಬಾಸ್.. ಡಿಕೆ ಬಾಸ್‌‌.. ದೇವಸ್ಥಾನದಲ್ಲಿ ಪೈಪೋಟಿಗೆ ಬಿದ್ದಂತೆ ಜೈಕಾರ ಕೂಗಿದ ಬೆಂಬಲಿಗರು

ಚಾಮರಾಜನಗರ: ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನ ಮುಂಭಾಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ‌.ಕೆ.ಶಿವಕುಮಾರ್ ಬೆಂಬಲಿಗರು ಪೈಪೋಟಿಗೆ ಬಿದ್ದಂತೆ 'ಸಿದ್ದು ಬಾಸ್', 'ಡಿಕೆ ಬಾಸ್' ಎಂದು ಜೈಕಾರ ಕೂಗಿದರು.

ಮೇಕೆದಾಟು ಯೋಜನೆ ಕುರಿತು ಜನಜಾಗೃತಿ ಮೂಡಿಸಲು ನಗರದಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಪಾಲ್ಗೊಳ್ಳಲೆಂದು ಭಾನುವಾರ ಸಿದ್ದರಾಮಯ್ಯ ಮತ್ತು ಡಿಕೆಶಿ ಆಗಮಿಸಿದ್ದರು. ಇದಕ್ಕೂ ಮುನ್ನ ಇಬ್ಬರೂ ಚಾಮರಾಜೇಶ್ವರ ದೇವಸ್ಥನಾದಲ್ಲಿ ದೇವರ ದರ್ಶನ ಪಡೆದರು. ಈ ವೇಳೆ ಕಾಂಗ್ರೆಸ್​ ಕಾರ್ಯಕರ್ತರು ದೇವಸ್ಥಾನದ ಬಳಿ ಜಮಾಯಿಸಿದ್ದರು.

ದೇವಸ್ಥನದ ಬಾಗಿಲಲ್ಲೇ ಕಾಂಗ್ರೆಸ್​ ಕಾರ್ಯಕರ್ತರನ್ನು ಪೊಲೀಸರು ತಡೆದು ನಿಲ್ಲಿಸಿದ್ದರು. ಈ ವೇಳೆ 'ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಜೈ' ಎಂದು ಹಲವು ಕೂಗಿದರು. ಇದಕ್ಕೆ ಪ್ರತಿಯಾಗಿ ಡಿಕೆಶಿ ಬೆಂಬಲಿಗರು 'ಬಾಸ್ ಬಾಸ್ ಡಿಕೆ ಬಾಸ್; ಎಂದರು. ಇದನ್ನು ಗಮನಿಸಿದ ಸಿದ್ದು ಬೆಂಬಲಿಗರು‌ 'ಸಿದ್ದು ಬಾಸ್' ಎನ್ನಲಾರಂಭಿಸಿದರು. ಸ್ಥಳದಲ್ಲಿದ್ದ ನಲಪಾಡ್ 'ದೇವಸ್ಥನದೊಳಗೆ ಜೈಕಾರ ಕೂಗಬೇಡ್ರಪ್ಪಾ' ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಆದರೂ ಮಾತು ಕೇಳದ ಬೆಂಬಲಿಗರು ಸಿದ್ದು, ಡಿಕೆಶಿ ದೇವಸ್ಥಾನದಲ್ಲಿ ಹೆಜ್ಜೆ ಇಟ್ಟಕಡೆಗೆಲ್ಲಾ ಹಿಂದೆ ಹಿಂದೆಯೇ ಹೋಗಿ ಸ್ಪರ್ಧೆಗೆ ಬಿದ್ದವರಂತೆ "ಸಿದ್ದು ಬಾಸ್, ಡಿಕೆ ಬಾಸ್" ಎಂದು ಕೂಗು ಹಾಕಿದರು. ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.