ನ್ಯೂಸ್

ಸಕಾಲಕ್ಕೆ ಚಿಕಿತ್ಸೆ ನೀಡದಿದ್ದರೆ ಭೀಕರ ಸ್ವರೂಪ ತಾಳಬಲ್ಲ ಕಾಯಿಲೆ

| ಡಾ. ಆಲೋಕ ವಿನೋದ ಕುಲಕರ್ಣಿ

ವಿಶ್ವ ಸ್ಕಿಜೋಫ್ರೇನಿಯಾ ದಿನವೆಂದು ಪ್ರತಿ ವರ್ಷ ಮೇ 24 ನ್ನು ಪರಿಗಣಿಸಲಾಗುತ್ತದೆ. ವಿಶ್ವದಲ್ಲಿ 20 ಮಿಲಿಯನ್ ರೋಗಿಗಳು ಈ ಭೀಕರ ಕಾಯಿಲೆಯಿಂದ ಬಳಲಿ ಬೆಂಡಾಗಿದ್ದಾರೆ. ಆದರೂ ನಮ್ಮ ದೇಶದಲ್ಲಿ ಮನೋರೋಗ ತಜ್ಞರ ಸಂಖ್ಯೆ ತೀರ ಕಡಿಮೆ ಮತ್ತು ಮಾನಸಿಕ ಆರೋಗ್ಯಕ್ಕೆ ಮೀಸಲಾಗಿಟ್ಟಿರುವ ಬಜೆಟ್ ತೀರಾ ಸ್ವಲ್ಪ ಎಂಬುದು ಅತ್ಯಂತ ಕಳವಳಕಾರಿ ಸಂಗತಿ.

ಸ್ಕಿಜೋಫ್ರೇನಿಯಾ ಕಾಯಿಲೆ ಚಿಕಿತ್ಸೆ ನೀಡದಿದ್ದರೆ ಭೀಕರ ಸ್ವರೂಪ ತಾಳಿ ರೋಗಿ ಆತ್ಮಹತ್ಯೆ ಮಾಡಿಕೊಳ್ಳಬಹುದು ಅಥವಾ ಇತರರನ್ನು ಕೊಲ್ಲಬಹುದು. ಮುಂಬೈಯಲ್ಲಿ ಹಲವು ದಶಕಗಳ ಹಿಂದೆ ಸ್ಕಿಜೋಫ್ರೇನಿಯಾ ಪೀಡಿತ ರಾಮನ್ ರಾಘವನ್ ಎಂಬಾತ ತನಗೆ ಇತರರನ್ನು ಕೊಲ್ಲು ಎಂಬ ಧ್ವನಿ ಕೇಳುತ್ತಿದೆೆ ಎನ್ನುತ್ತ ಒಂದು ಭೀಕರ ಕೊಲೆಯನ್ನೂ ಮಾಡಿದ್ದ. ಮುಂದೆ ಸವೋಚ್ಚ ನ್ಯಾಯಾಲಯ ಅವನ ಕಾಯಿಲೆಯ ಸ್ವರೂಪವನ್ನು ಪರಿಗಣಿಸಿ ಮರಣ ದಂಡನೆ ಶಿಕ್ಷೆಯನ್ನು ಕಡಿತಗೊಳಿಸಿ ಜೈಲುಶಿಕ್ಷೆ ವಿಧಿಸಿತು.

ರೋಗದ ಲಕ್ಷಣಗಳೇನು? : ನಿರುತ್ಸಾಹ.  ಒಂಟಿ ಜೀವನ ನಡೆಸುವ ಮನೋಭಾವ.  ಕೆಲವೊಮ್ಮೆ ಆತ್ಮಹತ್ಯೆಯ ಯೋಚನೆ.  ಹೆದರಿಕೆ, ನಿದ್ರಾಹೀನತೆ, ಎದೆಯಲ್ಲಿ ಡವ ಡವ ಅನಿಸುವದು, ಮೈಕೈ ನೋವು, ತಲೆ ಶೂಲೆ ಮುಂತಾದ ಲಕ್ಷಣಗಳೂ ಕಾಣಿಸಿಕೊಳ್ಳಬಹುದು. ಸೂಡೋ ನ್ಯೂರಾಟಿಕ್ ಎಂಬ ಸ್ಕಿಜೋಫ್ರೇನಿಯಾ ಕಾಣಿಸಿಕೊಂಡಾಗ ರೋಗಿಗೆ ಬರೀ ಆತಂಕ ಮತ್ತು ಖಿನ್ನತೆಯ ಲಕ್ಷಣಗಳು ತೋರಬಹುದು. ಹಲವು ಬಾರಿ ರೋಗಿಯು ಜೋರಾಗಿ ಅರಚಬಹುದು, ಅಳಬಹುದು, ನಗಬಹುದು, ಬಟ್ಟೆಗಳನ್ನು ಕಳಚಿ ಯಾರ ಪರಿವೆಯೂ ಇಲ್ಲದಂತೆ ರಸ್ತೆಗಳಲ್ಲಿ ಓಡಾಡಬಹುದು.

ಇತರರ ಮೇಲೆ ಸಂಶಯ ಪ್ರವೃತ್ತಿ - ಉದಾ: ಯಾರಾದರೂ ಮಾತನಾಡುತ್ತಿದ್ದರೆ ತನ್ನ ಬಗ್ಗೆಯೆ ಮಾತನಾಡುತ್ತಿದ್ದಾರೆ, ನನ್ನನ್ನು ಪೋಲಿಸರು ಅಟ್ಟಿಸಿಕೊಂಡು ಬರುತ್ತಿದ್ದಾರೆ, ನನ್ನ ಹೊಟ್ಟೆಯಲ್ಲಿ ವಿಷ ತುಂಬಿದ್ದಾರೆ, ಮಾಟ ಮಾಡಿಸಿದ್ದಾರೆ, ನನ್ನ ಮಡದಿಯ ಶೀಲ ಸರಿ ಇಲ್ಲ ಇತ್ಯಾದಿ ವಿಚಿತ್ರವಾದ ಸಂಶಯವನ್ನು ಇವರು ತುಂಬಿಕೊಂಡಿರುತ್ತಾರೆ. ವೈದ್ಯರು ಎಷ್ಟೇ ಪರಿಪರಿಯಾಗಿ ಇದು ನಿಮ್ಮ ತಪ್ಪು ಭ್ರಮೆ ಎಂದರೂ ರೋಗಿ ನಂಬುವದಿಲ್ಲ. ಇದಕ್ಕೆ ವೈದ್ಯಕೀಯ ಭಾಷೆಯಲ್ಲಿ ಪ್ಯಾರಾನಾಯ್ಡ ಡೆಲ್ಯೂಶನ್ ಎನ್ನುತ್ತಾರೆ.

ರೋಗಿಯ ಕಿವಿಯಲ್ಲಿ ನಾನಾ ತರಹದ ಧ್ವನಿಗಳು ಕೇಳುವವು. ಉದಾ: ನೀನು ಕೆಟ್ಟವ, ನಪುಂಸಕ, ನಿನ್ನನ್ನು ಕೊಲ್ಲುತ್ತೇವೆ, ನಾವು ಕೊಲ್ಲದಿದ್ದರೆ ಈ ಕೂಡಲೇ ನೀನೇ ಬಾವಿಗೆ ಬಿದ್ದು ಸಾಯಬೇಕು ಹೀಗೆ ವಿಚಿತ್ರ ಧ್ವನಿಗಳನ್ನು ರೋಗಿ ಆಲಿಸಿ ಹಲವು ಬಾರಿ ಅವುಗಳನ್ನು ಕಾರ್ಯರೂಪಕ್ಕೂ ತಂದಂತಹ ಪ್ರಕರಣಗಳನ್ನು ಮನೋವೈದ್ಯರು ಕಂಡಿದ್ದಾರೆ.  ರೋಗಿ ತಾನು ಏನು ವಿಚಾರ ಮಾಡುತ್ತಾನೋ, ಅವುಗಳೇ ಅವನ ಕಿವಿಯಲ್ಲಿ ಧ್ವನಿ ರೂಪದಲ್ಲಿ ಕೇಳಿಬರಬಹುದು.

ರೋಗ ನಿರ್ಣಯ ಮತ್ತು ಪರೀಕ್ಷೆ: ಸ್ಕಿಜೋಫ್ರೇನಿಯಾ ರೋಗ ನಿರ್ಣಯಕ್ಕೆ ಇವು ಅತ್ಯಗತ್ಯ. ಐದು ಪ್ರಮುಖ ಲಕ್ಷಣಗಳಲ್ಲಿ ಕನಿಷ್ಠ ಎರಡು ಕನಿಷ್ಠ ಒಂದು ತಿಂಗಳಿನಿಂದ ರೋಗದ ಲಕ್ಷಣಗಳು ಇರಬೇಕು. ಆ ಲಕ್ಷಣಗಳು ರೋಗಿಯ ಕೆಲಸ ಮಾಡುವ ಸಾಮರ್ಥ್ಯ ಅಥವಾ ಸಂಬಂಧಗಳ ಮೇಲೆ ಪರಿಣಾಮ ಬೀರಬೇಕು. ಈ ರೋಗವನ್ನು ಪತ್ತೆ ಹಚ್ಚಲು ಇಲ್ಲಿಯವರೆಗೆ ಯಾವುದೇ ರಕ್ತ ಪರೀಕ್ಷೆ ಅಥವಾ ಮಿದುಳಿನ ಸ್ಕಾ್ಯನ್ ಸಹಾಯಕಾರಿ ಆಗಿಲ್ಲ. ಮನೋ ವೈದ್ಯರ ಮೆಂಟಲ್ ಸ್ಟೇಟಸ್ ಪರೀಕ್ಷೆಯೇ ಅಂತಿಮ.

ಚಿಕಿತ್ಸೆ: ಮನೋ ವೈದ್ಯರು ಅನೇಕ ಚಿಕಿತ್ಸೆಗಳನ್ನು ನೀಡಿ ಕಾಯಿಲೆಯನ್ನು ಸಂಪೂರ್ಣವಾಗಿ ಹೋಗಲಾಡಿಸಬಲ್ಲರು. ಇ.ಸಿ.ಟಿ. ಚಿಕಿತ್ಸೆ, ಔಷಧಿ ಚಿಕಿತ್ಸೆ, ಆಪ್ತ ಸಮಾಲೋಚನೆ, ಪುನರ್ವವಸತಿ ಮೊದಲಾದ ಚಿಕಿತ್ಸೆಗಳಿಂದ ರೋಗಿಗೆ ಮರು ಜನ್ಮ ಕಲ್ಪಿಸಬಲ್ಲರು.

ಇತ್ತೀಚಿನ ದಿನಗಳಲ್ಲಿ ಕ್ಲೋಜಪಿನ್ ಮಾತ್ರೆ ಅನೇಕ ರೋಗಿಗಳಿಗೆ ಸಂಜೀವಿನಿ ಎಂದೇ ಅನ್ನಿಸಿದೆ. ಕೇವಲ 1% ರೋಗಿಗಳಲ್ಲಿ ಇದು ಬಿಳಿಯ ರಕ್ತ ಕಣಗಳನ್ನು ಕಡಿಮೆ ಮಾಡಬಹುದೆಂಬ ಅನವಶ್ಯಕ ಭೀತಿಯಿಂದ ಅನೇಕರು ಈ ಔಷಧಿ ಚಿಕಿತ್ಸೆಯಿಂದ ವಂಚಿತರಾಗಿದ್ದು ಖೇದಕರ. ವೈಯಕ್ತಿಕ ಅನುಭವದಲ್ಲಿ ಈ ಕ್ಲೋಜಪಿನ್ ಮಾತ್ರೆಯನ್ನು ಅನೇಕ ಬಾರಿ ರೋಗಿಗಳಿಗೆ ನೀಡಿ ಅವರಿಗೆ ಹೊಸ ಜನ್ಮವನ್ನೇ ನೀಡಿದ್ದೇವೆ. ಎಲ್ಲದಕ್ಕೂ ಧೈರ್ಯ, ಅನುಭವ, ಪರಿಣಿತಿ, ರೋಗಿಗಳ ಸಹಕಾರ ಅವಶ್ಯಕ. ಆತ್ಮಹತ್ಯೆ ವಿಚಾರವಿದ್ದಾಗ ರೋಗಿಗೆ ತಕ್ಷಣ ಇ.ಸಿ.ಟಿ. ಚಿಕಿತ್ಸೆ ನೀಡದಿದ್ದರೆ ಅದು ರೋಗಿಗೆ ಮಾಡುವ ಘೊರ ಅನ್ಯಾಯ. ಇ.ಸಿ.ಟಿ. ಚಿಕಿತ್ಸೆ ಮತ್ತು ಕ್ಲೋಜಪಿನ್ ಮಾತ್ರೆ ರೋಗಿಯ ಚಿತ್ರಣವನ್ನೇ ಬದಲಾಯಿಸುತ್ತವೆ. (ಲೇಖಕರು: ನರ ಹಾಗೂ ಮನೋರೋಗ ತಜ್ಞರು ಹುಬ್ಬಳ್ಳಿ)