ಶಿವಮೊಗ್ಗ: ಸಾಮಾಜಿಕ ಅಧ್ಯಯನಗಳು ಬದುಕಿಗೆ ವಿಶೇಷ ಹಾಗೂ ವಿಭಿನ್ನ ಅನುಭವಗಳನ್ನು ನೀಡುತ್ತವೆ. ಹೀಗಾಗಿ ವಿದ್ಯಾರ್ಥಿಗಳು ಸಾಮಾಜಿಕ ಅಧ್ಯಯನಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಬೇಕು ಎಂದು ಪ್ರಾಂತೀಯ ಎನ್‌ಎಸ್‌ಎಸ್ ನಿರ್ದೇಶನಾಲಯದ ನಿರ್ದೇಶಕ ಡಾ. ವೈ.ಎಂ.ಉಪ್ಪಿನ್ ಹೇಳಿದರು.
ಎಟಿಎನ್‌ಸಿ ಕಾಲೇಜಿನಲ್ಲಿ ಶನಿವಾರ ಕುವೆಂಪು ವಿವಿ ಮಟ್ಟದ ಅಂತರ ಕಾಲೇಜು ಎನ್‌ಎಸ್‌ಎಸ್ ಶಿಬಿರದ ಸಮಾರೋಪದಲ್ಲಿ ಮಾತನಾಡಿ, ವ್ಯಕ್ತಿತ್ವ ವಿಕಸನದ ಬದಲಾವಣೆಗಳಿಂದ ಮಾತ್ರ ಶಿಬಿರಗಳು ಯಶಸ್ಸು ಪಡೆಯುತ್ತವೆ. ಮುಂದಿನ ದಿನಗಳಲ್ಲಿ ಭಾರತ ಸರ್ಕಾರ ಹೆಣ್ಣು ಮಕ್ಕಳಿಗಾಗಿ ವಿಶೇಷ ಶಿಬಿರಗಳನ್ನು ಆಯೋಜಿಸಲಿದೆ ಎಂದು ತಿಳಿಸಿದರು.
ಎನ್‌ಇಎಸ್ ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ್ ಮಾತನಾಡಿ, ಮನುಷ್ಯತ್ವದಿಂದ ಬದುಕುವುದನ್ನೇ ಜನರು ಮರೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಸೌಜನ್ಯ ಹಾಗೂ ಪರಿಪೂರ್ಣ ವ್ಯಕ್ತಿತ್ವ ಪಡೆಯಲು ಇಂತಹ ಶಿಬಿರಗಳು ಸಹಕಾರಿ ಎಂದರು.
ಸೇವಾ ಮನೋಭಾವ ರಕ್ತಗತವಾಗಿ ಬರಬೇಕು. ಸೇವೆಯಿಂದ ನಮ್ಮ ಸುತ್ತಲಿನ ಊರು, ಪರಿಸರ ಅನೇಕ ಬದಲಾವಣೆ ಕಾಣುತ್ತವೆ. ಶಿಬಿರಗಳೆಂದರೆ ಪ್ರಯೋಗಗಳ ಹೂರಣ. ಅಂತಹ ಪ್ರಯೋಗಗಳಿಂದ ಮತ್ತಷ್ಟು ಸಮಾಜಮುಖಿ ಚಿಂತನೆಗಳು ಹೊರಹೊಮ್ಮಲಿ ಎಂದರು.
ಕುವೆಂಪು ವಿವಿ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ. ನಾಗರಾಜ ಪರಿಸರ ಮಾತನಾಡಿದರು. ಎಟಿಎನ್‌ಸಿ ಕಾಲೇಜಿನ ಪ್ರಾಚಾರ್ಯೆ ಪ್ರೊ. ಪಿ.ಆರ್.ಮಮತಾ ಅಧ್ಯಕ್ಷತೆ ವಹಿಸಿದ್ದರು. ಎನ್‌ಎಸ್‌ಎಸ್ ಶಿಬಿರಾಧಿಕಾರಿಗಳಾದ ಪ್ರೊ. ಕೆ.ಎಂ.ನಾಗರಾಜ, ಪ್ರೊ. ಮಲ್ಲಿಕಾರ್ಜುನ ಇತರರಿದ್ದರು.