ತಿರುವನಂತಪುರಂ: ದಕ್ಷಿಣ ಭಾರತದ ರಾಜ್ಯಗಳು ಅಭಿವೃದ್ಧಿಯಾಗದೆ ವಿಕಸಿತ ಭಾರತ ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ತಿಳಿಸಿದ್ದಾರೆ. ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಷಾ, ‘ವಿಕಸಿತ ಕೇರಳದಿಂದ ವಿಕಸಿತ ಭಾರತವಾಗಲು ಸಾಧ್ಯ, ಹಾಗಾಗಿ ಇಂದಿನಿಂದ ಬಿಜೆಪಿಯ ಮೂಲ ಗುರಿ ವಿಕಸಿತ ಕೇರಳವಾಗಿರುತ್ತದೆ. ಬಿಜೆಪಿ ಇಲ್ಲದೆ ಕೇರಳದಲ್ಲಿ ಯಾವುದೇ ಅಭಿವೃದ್ಧಿ ಇಲ್ಲ. ಮೋದಿ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ವಿಳಿಂಜಿಂ ಬಂದರಿನಂತಹ ಯೋಜನೆಯನ್ನು ರಾಜಕ್ಕೆ ನೀಡಿದೆ.
ಎರಡು ವಂದೇ ಭಾರತ್ ರೈಲುಗಳ ಮೂಲಕ 11 ಜಿಲ್ಲೆಗಳನ್ನು ಸಂರ್ಪಸಿದೆ ಮತ್ತು ರೈಲ್ವೆ ಬಜೆಟ್ನಲ್ಲಿ ಕೇರಳದ ಅನುದಾನ 2004ರಲ್ಲಿ 372 ಕೋಟಿ ರೂ. ಇತ್ತು, ಈಗ ಅದನ್ನು 3700 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಹಿಂದಿನ ಕಾಂಗ್ರೆಸ್ ಸರ್ಕಾರಕ್ಕಿಂಥ ಹಲವು ಪಟ್ಟು ಹೆಚ್ಚು ಅನುದಾನವನ್ನು ಕೇರಳಕ್ಕೆ ಬಿಡುಗಡೆ ಮಾಡಲಾಗಿದೆ ಎಂದರು. ಅಲ್ಲದೆ, ಕೇರಳದಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಧಿಕಾರಕ್ಕೆ ಬರುವುದಕ್ಕಿಂತ ರಾಜ್ಯ ಬಿಜೆಪಿ ಕಚೇರಿ ವಿಕಸಿತ ಕೇರಳದ ಕೇಂದ್ರಬಿಂದುವಾಗುವುದು ಬಿಜೆಪಿಗೆ ಹೆಚ್ಚು ಮುಖ್ಯ ಎಂದು ಷಾ ತಿಳಿಸಿದರು.