ಅಹಮದಾಬಾದ್: ಸೆಕ್ಸ್ ಚೇಂಜ್ ಅರ್ಥಾತ್ ಲಿಂಗ ಪರಿವರ್ತನೆ ಮಾಡಿಸಿಕೊಂಡ ವ್ಯಕ್ತಿಯೊಬ್ಬರು ಈಗ ತಮ್ಮಲ್ಲಿರುವುದು ಒಂದಕ್ಕೊಂದು ತಾಳೆಯಾಗದ್ದರ ಹಿನ್ನೆಲೆಯಲ್ಲಿ ಮತ್ತಷ್ಟು ಬದಲಾವಣೆಗಳನ್ನು ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಹೀಗಾಗಿ ಈ ಸಂಬಂಧ ಅವರು ತಮಗೆ ಎದುರಾಗಿರುವ ತೊಂದರೆಯನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲನ್ನೂ ಏರಿದ್ದಾರೆ.
31 ವರ್ಷ ವಯಸ್ಸಿನ ದಂತವೈದ್ಯರೊಬ್ಬರು ಜನ್ಮತಃ ಹುಡುಗಿಯಾಗಿದ್ದರೂ ಹುಡುಗನಂಥ ಸ್ವಭಾವ ಕಂಡುಬಂದ ಹಿನ್ನೆಲೆಯಲ್ಲಿ ಅವರು ಲಿಂಗ ಪರಿವರ್ತನೆ ಮಾಡಿಸಿಕೊಂಡು ಹುಡುಗ ಎನಿಸಿಕೊಂಡಿದ್ದಾರೆ. ಜೆಂಡರ್ ಡಿಸ್ಫೋರಿಯಾ ಎಂಬ ಸಮಸ್ಯೆಯಿಂದ ಬಳಲುತ್ತಿದ್ದ ಇವರು 2018ರ ಏಪ್ರಿಲ್ನಲ್ಲಿ ಶಸ್ತಚಿಕಿತ್ಸೆಗೆ ಒಳಗಾಗಿ ಲಿಂಗಪರಿವರ್ತನೆ ಮಾಡಿಸಿಕೊಂಡಿದ್ದರು. ಹೀಗೆ ಲಿಂಗ ಪರಿವರ್ತನೆ ಮಾಡಿಸಿಕೊಂಡಿರುವ ಈ ವ್ಯಕ್ತಿಗೆ ಈಗ ಮತ್ತಷ್ಟು ಬದಲಾವಣೆಗಳ ಸವಾಲು ಎದುರಾಗಿದೆ.
ಲಿಂಗ ಪರಿವರ್ತನೆ ಬಳಿಕ ಆಧಾರ್ ಕಾರ್ಡ್, ಪಾಸ್ಪೋರ್ಟ್ ಹಾಗೂ ಡ್ರೈವಿಂಗ್ ಲೈಸೆನ್ಸ್ಗಳನ್ನು ತಾವು ಪುರುಷ ಎನಿಸಿಕೊಂಡ ನಂತರದ ಹೊಸ ಹೆಸರು ಹಾಗೂ ಲಿಂಗ ಎಂಬ ಸ್ಥಳದಲ್ಲಿ ಪುರುಷ ಎಂಬ ನಮೂದಿನೊಂದಿಗೇ ಹೊಸದಾಗಿ ಪಡೆದಿದ್ದಾರೆ. ಆದರೆ ಅವರ ಜನ್ಮ ಪ್ರಮಾಣಪತ್ರ, ಶೈಕ್ಷಣಿಕ ಪ್ರಮಾಣಪತ್ರಗಳು ಇನ್ನೂ ಹಳೆಯ ಲಿಂಗ-ಹೆಸರುಗಳಲ್ಲೇ ಇದ್ದು ಅದರಿಂದಾಗಿ ಸಮಸ್ಯೆ ಎದುರಿಸುವಂತಾಗಿದೆ. ಈಗಿನ ಹೆಸರು ಹಾಗೂ ಲಿಂಗಕ್ಕೆ ಅವು ತಾಳೆಯಾಗದ್ದರಿಂದ ಅವರು ಹೊಸದಾಗಿ ಆ ಪ್ರಮಾಣಪತ್ರಗಳನ್ನು ಪಡೆಯಬೇಕಾಗಿದೆ. ಈ ಕುರಿತು ಸಂಬಂಧಿತ ಪ್ರಾಧಿಕಾರಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಅವರು ಗುಜರಾತ್ ಹೈಕೋರ್ಟ್ನಲ್ಲಿ ಮನವಿ ಸಲ್ಲಿಸಿದ್ದಾರೆ.
ಹೀಗಾಗಿ ಈ ವ್ಯಕ್ತಿಯ ಜನ್ಮ ಪ್ರಮಾಣಪತ್ರಕ್ಕೆ ಧಂಧೂಕ ಮುನಿಸಿಪಾಲಿಟಿ, ಗುಜರಾತ್ ರಾಜ್ಯ ಸೆಕೆಂಡರಿ ಹಾಗೂ ಹೈಯರ್ ಸೆಕಂಡರಿ ಎಜುಕೇಷನ್ ಬೋರ್ಡ್, ಭಾವ್ನಗರ ಯುನಿವರ್ಸಿಟಿಗಳಿಗೆ ಹೈಕೋರ್ಟ್ ಸೂಚನೆ ನೀಡಿದ್ದು, ಈ ಸಂಬಂಧ ಅವುಗಳ ಅಭಿಪ್ರಾಯವನ್ನು ಕೋರಿದೆ. ಮಾತ್ರವಲ್ಲ ಮುಂದಿನ ವಿಚಾರಣೆಗಾಗಿ ಫೆ.18ರಂದು ಹಾಜರಾಗುವಂತೆ ಹೈಕೋರ್ಟ್ ಸೂಚನೆ ನೀಡಿದೆ. (ಏಜೆನ್ಸೀಸ್)