| ಮಂಜುನಾಥ ಭೋವಿ, ಮೈಸೂರು
ಕಾರ್ನೆಷನ್ ಹೂವು ಅಲಂಕಾರಕ್ಕೆ ಅಷ್ಟೇ ಅಲ್ಲ, ಅದು ರೈತರ ಆದಾಯ ಮೂಲವೂ ಹೌದು. ಎಂಬಿಎ ಪದವೀಧರ ಎಂ.ಎಸ್. ಮನ್ವಂತ್ ಇದನ್ನು ಸಾಧಿಸಿ ತೋರಿಸಿದ್ದಾರೆ. ಅವರ ಸಾಧನೆಗೆ ತಂದೆ ಸುರೇಶ್ಬಾಬು ಸಾಥ್ ನೀಡಿದ್ದಾರೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗದ್ದಿಗೆ ಗ್ರಾಮ ಬಳಿಯ ಕುಟ್ಟವಾಡಿಯಲ್ಲಿ 40 ಎಕರೆಯಲ್ಲಿ ಸಮಗ್ರ ಕೃಷಿ ಕೈಗೊಂಡಿರುವ ಅವರು, ಒಂದು ಎಕರೆ ಜಾಗವನ್ನು ಸುವಾಸನೆಯ ಕಾರ್ನೆಷನ್ ಹೂವಿನ ಕೃಷಿಗಾಗಿಯೇ ಮೀಸಲಿಟ್ಟಿದ್ದಾರೆ. ಇಷ್ಟು ಜಾಗದಲ್ಲೇ ಪಾಲಿಹೌಸ್ ನಿರ್ವಿುಸಿಕೊಂಡು ಬಣ್ಣ ಬಣ್ಣದ ಕಾರ್ನೆಷನ್ ಹೂವು ಮಾತ್ರ ಬೆಳೆಯುತ್ತಿದ್ದಾರೆ. ಆ ಮೂಲಕ ಆರ್ಥಿಕ ಸುಸ್ಥಿರತೆ ಕಂಡುಕೊಂಡಿದ್ದಾರೆ.
ಈ ಹೂವುಗಳನ್ನು ಬೆಂಗಳೂರಿನ ಮಾರುಕಟ್ಟೆಗೆ ಒಯ್ದು ಮಾರಾಟ ಮಾಡುತ್ತಾರೆ. ಇದೊಂದರಿಂದಲೇ ತಿಂಗಳಿಗೆ 2.5 ಲಕ್ಷದಿಂದ 3 ಲಕ್ಷ ರೂ.ವರೆಗೆ ವಹಿವಾಟು ಮಾಡುತ್ತಿದ್ದಾರೆ. ವರ್ಷಕ್ಕೆ 12 ಲಕ್ಷ ರೂ. ಗಳಿಸುತ್ತಿದ್ದಾರೆ. ಈ ಹೂವು ಬೆಳೆಯಲು ನಿರ್ವಿುಸಿರುವ ಪಾಲಿಹೌಸ್ ಛಾವಣಿ ಮೇಲೆ ಬೀಳುವ ಮಳೆ ನೀರನ್ನು ಸಂಗ್ರಹಿಸಲು ಕೆರೆ ನಿರ್ವಿುಸಿದ್ದು, ಹೂವುಗಳನ್ನು ಬೆಳೆಸಲು ಆ ನೀರನ್ನೇ ಬಳಸಿಕೊಳ್ಳಲಾಗುತ್ತಿದೆ.
ಗಿಡಗಳನ್ನು ನಾಟಿ ಮಾಡಿದ 3 ತಿಂಗಳಿನಲ್ಲಿ ಬೆಳೆ ಆರಂಭವಾಗುತ್ತದೆ. ಒಮ್ಮೆ ನಾಟಿ ಮಾಡಿ ಸರಿಯಾಗಿ ನಿರ್ವಹಣೆ ಮಾಡಿದಲ್ಲಿ ಕನಿಷ್ಠ 5 ವರ್ಷ ಉತ್ತಮ ಬೆಳೆ ತೆಗೆಯಬಹುದು. ವಾರದಲ್ಲಿ 3-4 ದಿನ ಕಟಾವು ಮಾಡಬೇಕು. ಮಾರುಕಟ್ಟೆಯಲ್ಲಿ ಒಂದು ಹೂವಿಗೆ ಕನಿಷ್ಠ 5ರಿಂದ 20 ರೂ.ವರೆಗೆ ಬೆಲೆ ಸಿಗುತ್ತದೆ ಎಂದು ಹೇಳುತ್ತಾರೆ ಎಂ.ಎಸ್. ಮನ್ವಂತ್.
ಹೆಚ್ಚಾಗಿ ಅಲಂಕಾರಕ್ಕಾಗಿ ಮತ್ತು ಹೂಗುಚ್ಛಗಳನ್ನು ತಯಾರಿಸಲು ಕಾರ್ನೆಷನ್ ಹೂವು ಬಳಸುತ್ತಾರೆ. ಕ್ರಿಸ್ವುಸ್, ದೀಪಾವಳಿ, ದಸರಾ, ಜನ್ಮದಿನಾಚರಣೆ, ಪ್ರೇಮಿಗಳ ದಿನಾಚರಣೆ ಸಂದರ್ಭದಲ್ಲಿ ಈ ಹೂವಿಗೆ ಬೇಡಿಕೆ ಇರುತ್ತದೆ. ಮದುವೆ ಮಂಟಪದ ಅಲಂಕಾರಕ್ಕಾಗಿ ಹೆಚ್ಚು ಬಳಸುತ್ತಾರೆ. ಚುನಾವಣೆ, ರಾಜಕೀಯ ಸಮಾವೇಶದಲ್ಲೂ ಇದಕ್ಕೆ ಬೇಡಿಕೆ ಹೆಚ್ಚು.
‘ನನಗೆ ಮೊದಲಿನಿಂದಲೂ ಕೃಷಿ ಕುರಿತು ಒಲವು. ಚಿಕ್ಕ ವಯಸ್ಸಿನಿಂದಲೇ ತಂದೆಯೊಂದಿಗೆ ತೋಟಕ್ಕೆ ಬರುತ್ತಿದ್ದೆ. ರಜೆಯಲ್ಲಿ ಎಲ್ಲ ಮಕ್ಕಳು ಆಟೋಟ, ಪ್ರವಾಸ, ಸಂಬಂಧಿಕರ ಮನೆಗೆ ಹೋದರೆ, ನಾನು ತೋಟಕ್ಕೆ ಹೋಗುತ್ತಿದ್ದೆ. ಸ್ನಾತಕ ಪದವಿ ಪೂರ್ಣಗೊಂಡ ಬಳಿಕ ಪೂರ್ಣಪ್ರಮಾಣದಲ್ಲಿ ಕೃಷಿಕನಾದೆ. ದೊಡ್ಡ ಖಾಸಗಿ ಕಂಪನಿಯಲ್ಲಿ ಗಳಿಸುವಷ್ಟು ಹಣವನ್ನು ಕೃಷಿಯಲ್ಲೇ ಸಂಪಾದಿಸುತ್ತಿರುವೆ. ಇದು ನನಗೆ ಸಂತೋಷ, ನೆಮ್ಮದಿ ಕೊಟ್ಟಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಮನ್ವಂತ್.