ಬೆಂಗಳೂರು: ರಾತ್ರಿ ಗಸ್ತು ವೇಳೆ ತಪಾಸಣೆಗೆ ಮುಂದಾದ ಪೊಲೀಸರ ಮೇಲೆ ಮಚ್ಚು ಬೀಸಿ ಹಲ್ಲೆ ನಡೆಸಿದ ಕಿಡಿಗೇಡಿಯನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.
ಜೆ.ಜೆ.ನಗರದ ಫಾರೂಕಿನಗರದ ಅಫ್ರಿದ್ ಖಾನ್ ಬಂಧಿತ. ಚಾಮರಾಜಪೇಟೆ ಅನಂತರಾಮಯ್ಯ ಕಾಂಪೌಂಡ್ ಸಮೀಪ ಬುಧವಾರ ಮಧ್ಯಾಹ್ನ ಈ ಕೃತ್ಯ ನಡೆದಿದೆ. ಚಾಮರಾಜಪೇಟೆ ಠಾಣೆ ಕಾನ್‌ಸ್ಟೆಬಲ್‌ಗಳಾದ ವಿಜಯಕುಮಾರ್ ಮತ್ತು ಶಿವಪ್ರಸಾದ್ ದಾನರೆಡ್ಡಿ ಹಲ್ಲೆಗೆ ಒಳಗಾಗಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.
ಕ್ರಿಮಿನಲ್ ಹಿನ್ನಲೆಯುವಳ್ಳ ಅಫ್ರಿದ್ ಖಾನ್, 5 ಪ್ರಕರಣಗಳು ದಾಖಲಾಗಿವೆ. ಜೆ.ಜೆ.ನಗರ ಠಾಣೆಯಲ್ಲಿಎಂಓಬಿ ಕಾರ್ಡ್ ತೆರೆದು ಇತ್ತೀಚೆಗೆ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದರು. ಚಾಮರಾಜಪೇಟೆ ಠಾಣೆಯ ಕಾನ್‌ಸ್ಟೆಬಲ್‌ಗಳಾದ ವಿಜಯಕುಮಾರ್ ಮತ್ತು ಶಿವಪ್ರಸಾದ್ ದಾನರೆಡ್ಡಿ ಬುಧವಾರ ಚೀತಾ(ಗಸ್ತು) ಬೈಕ್‌ನಲ್ಲಿ ಗಸ್ತಿನಲ್ಲಿದ್ದರು.
3 ಗಂಟೆಯಲ್ಲಿ ಚಾಮರಾಜಪೇಟೆಯ ಅನಂತರಾಮಯ್ಯ ಕಾಂಪೌಂಡ್ 2ನೇ ಕ್ರಾಸ್‌ನಲ್ಲಿ ಖಾನ್ ಶಂಕಾಸ್ಪದವಾಗಿ ಬರುತ್ತಿದ್ದ. ಗಮನಿಸಿದ ಕಾನ್‌ಸ್ಟೆಬಲ್‌ಗಳು, ಕೂಡಲೇ ಎಸಿಸಿಟಿಎನ್‌ಎಸ್ ಆಪ್ (ಹಳೇ ಕ್ರಿಮಿನಲ್‌ಗಳ ಪತ್ತೆ ಹಚ್ಚುವ ಬೆರಳಚ್ಚು ಪರೀಕ್ಷೆ)ನಲ್ಲಿ ತಪಾಸಣೆಗೆ ನಿಂತುಕೊಳ್ಳುವಂತೆ ಸೂಚಿಸಿದ್ದಾರೆ. ಇದರಿಂದ ಕೆರಳಿದ ಖಾನ್, ಪೊಲೀಸರ ಮೇಲೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ.
ಪೊಲೀಸರು ನನಗೆ ಸುಮ್ಮನೆ ತೊಂದರೆ ಕೊಡುತ್ತಿದ್ದೀರ. ನಿನ್ನೆ ತಾತೇ ಜೈಲಿನಿಂದ ಬಂದಿದ್ದೇನೆ. ಆಗಲೇ ಚೆಕ್ ಮಾಡಲು ಬಂದಿದ್ದೀರಾ. ನನ್ನ ತಂಟೆಗೆ ಬರದಂತೆ ಮಾಡುತ್ತೇನೆ ಎಂದು ನಿಂದಿಸಿ ಬೆನ್ನ ಹಿಂದೆ ಅಡಗಿಸಿಟ್ಟಿದ್ದ ಮಚ್ಚನ್ನು ತೆಗೆದು ಪೊಲೀಸರ ಮೇಲೆ ಖಾನ್ ಬೀಸಿದ್ದಾನೆ.
ತಪ್ಪಿಸಿಕೊಳ್ಳುವ ಬರದಲ್ಲಿ ದಾನರೆಡ್ಡಿ ಎಡಗೈನ ಹೆಬ್ಬರಳಿ ಗಾಯವಾಗಿದೆ.
ಎಚ್ಚೆತ್ತ ವಿಜಯಕುಮಾರ್ ಹಿಂದಿನಿಂದ ಆರೋಪಿಯನ್ನು ಹಿಡಿದುಕೊಂಡಿದ್ದಾರೆ. ಕೂಡಲೇ ಹೊಯ್ಸಳ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡ ಪೊಲೀಸರು, ಠಾಣೆಗೆ ಆರೋಪಿಯನ್ನು ಕರೆತಂದು ವಿಚಾರಣೆ ನಡೆಸಿದಾಗ ಆರೋಪಿ ಹಿನ್ನೆಲೆ ಪತ್ತೆಯಾಗಿದೆ. ಗಾಯಾಳು ಕಾನ್‌ಸ್ಟೆಬಲ್ ದಾನರೆಡ್ಡಿ ದೂರಿನ ಮೇರೆಗೆ ಹಲ್ಲೆ, ಸರ್ಕಾರಿ ಅಧಿಕಾರಿ ಕರ್ತವ್ಯಕ್ಕೆ ಅಡ್ಡಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿ ಖಾನ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.