ಬೆಂಗಳೂರು: ಕರೊನಾ ನಿರೋಧಕ ಲಸಿಕೆ ಬಗ್ಗೆ ಗೇಲಿ ಮಾಡುತ್ತಾ ಲಸಿಕೆಯನ್ನ ತೆಗೆದುಕೊಳ್ಳಬೇಡಿ ಎಂದು ಅಪಪ್ರಚಾರ ಮಾಡಿ, ಜನರಲ್ಲಿ ಸಂಶಯದ ಬೀಜ ಬಿತ್ತಲು ಪ್ರಯತ್ನಿಸಿದವರಿಂದ ಇನ್ನೆಂತಹ ಪ್ರತಿಕ್ರಿಯೆ ನಿರೀಕ್ಷಿಸಲು ಸಾಧ್ಯವೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿರುಗೇಟು ನೀಡಿದರು.
ಯಾವ ಸಾಧನೆಗೆ ಈ ಸಂಭ್ರಮ? ಎಂದು ಕೇಳಿದ ಸಿದ್ದರಾಮಯ್ಯ ಅವರಿಗೆ ಶುಕ್ರವಾರ ಕರೆದ ಮಾಧ್ಯಮಗೋಷ್ಠಿಯಲ್ಲಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಉತ್ತರಿಸಿ, ದೇಶದಲ್ಲಿ ಲಸಿಕೆಗೆ ಅರ್ಹ 90 ಕೋಟಿ ಜನರ ಪೈಕಿ 70 ಕೋಟಿ ಜನರಿಗೆ ಮೊದಲ ಡೋಸ್ ಹಾಗೂ 30 ಕೋಟಿ ಜನರಿಗೆ ಎರಡನೇ ಡೋಸ್ ಲಸಿಕೆ ನೀಡಿರುವುದು, ಸಂಕಷ್ಟವನ್ನು ನಾವೆಲ್ಲ ಒಂದಾಗಿ ನಿರ್ವಹಿಸುತ್ತೇವೆ ಎಂದು ವಿಶ್ವಕ್ಕೆ ದೇಶದ ಜನರು ಸಂದೇಶ ಸಾರಿರುವುದು ಕಡಿಮೆ ಸಾಧನೆಯೆ? ಎಂದು ಮರು ಪ್ರಶ್ನಿಸಿದರು.
ಜಗತ್ತಿನ ಹಲವು ದಿಗ್ಗಜರು ಕೊಂಡಾಡಿ ಭಾರತದ ವರ್ಚಸ್ಸು, ವಿಶ್ವಾಸ ಹೆಚ್ಚಲು ನೆರವಾಗುತ್ತಿದ್ದಾರೆ. ಈ ಬೆಳವಣಿಗೆಯಿಂದ ದೇಶದ ಜನರಿಗೆ ಅನುಕೂಲವಾಗುತ್ತದೆ. ಸಿದ್ದರಾಮಯ್ಯ ಕೂಡ ಸಂತಸ ವ್ಯಕ್ತಪಡಿಸುವ ಬದಲಿಗೆ ನೆಗೆಟಿವ್ ಹೇಳಿಕೆ ನೀಡಿರುವುದು ಕೀಳುಮಟ್ಟದ ರಾಜಕಾರಣ, ಅವರಲ್ಲಿರುವ ಮತ್ಸರ ತೋರಿಸಿಕೊಡುತ್ತದೆ ಎಂದು ಅಶ್ವತ್ಥ ನಾರಾಯಣ ಕಿಡಿಕಾರಿದರು.
ಸಿಎಂ ವಿವೇಚನೆಗೆ: ಬೆಂಗಳೂರು ಉಸ್ತುವಾರಿಯನ್ನ ಯಾರಿಗೆ ಕೊಡಬೇಕು ಎನ್ನುವುದು ಸಿಎಂ ಬಸವರಾಜ ಬೊಮ್ಮಾಯಿ ಅವರ ವಿವೇಚನೆಗೆ ಬಿಟ್ಟದ್ದು. ಅವರ ಬಳಿಯೇ ಇದ್ದರೆ ಇನ್ನೂ ಅನುಕೂಲ ಎಂದರು. ಮಳೆ ನಿಂತ ತಕ್ಷಣ ರಸ್ತೆ ಗುಂಡಿ ಮುಚ್ಚುವ, ರಿಪೇರಿ ಹಾಗೂ ಡಾಂಬರೀಕರಣ ಕಾಮಗಾರಿ ನಡೆಯಲಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.