ನ್ಯೂಸ್

ಲಾಕ್​ಡೌನ್​ ಯಶಸ್ವಿಗೆ ಮತ್ತಷ್ಟು ಬಿಗಿ ಕ್ರಮ: ಗೃಹ ಸಚಿವ

arunakunigal

ಬೆಂಗಳೂರು: ಗ್ರಾಮಾಂತರ ಪ್ರದೇಶದಲ್ಲಿ ಕೋವಿಡ್ ವ್ಯಾಪಕವಾಗಿ ಹಬ್ಬುತ್ತಿದೆ. ಆದರೂ ಲಾಕ್​ಡೌನ್​ ನಿಯಮಗಳನ್ನು ಜನ ಸಂಪೂರ್ಣವಾಗಿ ಪಾಲಿಸುತ್ತಿಲ್ಲ. ಹಾಗಾಗಿ ಪೊಲೀಸರು ಕೈಗೊಂಡಿರುವ ಕ್ರಮಗಳನ್ನು ಮತ್ತಷ್ಟು ಬಿಗಿ ಗೊಳಿಸಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಎಚ್ಚರಿಕೆ ನೀಡಿದರು.

ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಗೃಹ ಸಚಿವ, ಜನರು ಅನವಶ್ಯಕವಾಗಿ ಮನೆಯಿಂದ ಹೊರಗಡೆ ಬರುತ್ತಿದ್ದಾರೆ. ಯಾದಗಿರಿಯಲ್ಲಿ ಮದುವೆಗೆ ಮೋಟಾರ್​ ಸೈಕಲ್​ನಲ್ಲಿ ಐದು ಜನ ತೆರಳುತ್ತಿರುವುದು ಬೆಳಕಿಗೆ ಬಂದಿದೆ‌. ಹೀಗಾಗಿ ವಾಹನಗಳನ್ನು ಸೀಜ್ ಮಾಡುವ ಕಾರ್ಯಾಚರಣೆಯನ್ನು ಮತ್ತಷ್ಟು ಕಠಿಣವಾಗಿ ಜಾರಿ ಮಾಡಲಾಗುವುದು. ಈಗ ಜಾರಿಯಲ್ಲಿರುವ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸುವ ಮೂಲಕ ಲಾಕ್​ಡೌನ್​ ಅನ್ನು ಯಶಸ್ವಿ ಗೊಳಿಸಲಾಗುವುದು ಎಂದರು.

ಗ್ರಾಮಾಂತರ ಪ್ರದೇಶಗಳಲ್ಲಿ ಜಿಲ್ಲಾಧಿಕಾರಿಗಳು ಮೂರ್ನಾಲ್ಕು ದಿನ ನಿರಂತರವಾಗಿ ಲಾಕ್​ಡೌನ್​ ಜಾರಿ ಮಾಡಿದ್ದಾರೆ. ಆದರೂ ಜನ ಗಂಭೀರತೆಯನ್ನ ಅರಿತು ಕೊಳ್ಳುತ್ತಿಲ್ಲ. ಲಾಕ್​ಡೌನ್​ಗೆ ಸಹಕಾರ ನೀಡುತ್ತಿಲ್ಲ. ಲಾಕ್​ಡೌನ್​ ಏಕೆ ಜಾರಿಯಾಗಿದೆ ಎಂಬುದನ್ನ ಅರ್ಥ ಮಾಡಿಕೊಳ್ಳದಿದ್ದರೆ ಕೋವಿಡ್ ನಿಯಂತ್ರಣ ಸಾಧ್ಯವಿಲ್ಲ ಎಂದು ಗೃಹ ಸಚಿವರು ಬೇಸರ ವ್ಯಕ್ತಪಡಿಸಿದರು.