ಬೆಂಗಳೂರು: ಕರೊನಾ ಸೋಂಕು ಪ್ರಕರಣಗಳು ಹೆಚ್ಚಿರುವ ಜಿಲ್ಲೆಗಳಲ್ಲಿ ಲಾಕ್ಡೌನ್ ವಿಸ್ತರಣೆ ಭೇಷ್ ಅಂತೀರಾ, ಆರ್ಥಿಕ ಚಟುವಟಿಕೆ, ಆರ್ಥಿಕತೆ ಸುಧಾರಣೆಗೆ ಏನಪ್ಪಾ ಮಾಡೋದು?... ಇದು ಲಾಕ್ಡೌನ್ ವಿಸ್ತರಣೆ ಬೇಡಿಕೆ ಮುಂದಿಟ್ಟ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಶ್ನಿಸಿದ ಪರಿ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮೈಸೂರು, ಹಾಸನ, ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಮಂಡ್ಯ, ಬೆಳಗಾವಿ ಜಿಲ್ಲೆಗಳ ಜಿಲ್ಲಾಡಳಿತಗಳೊಂದಿಗೆ ಸಿಎಂ ಯಡಿಯೂರಪ್ಪ ಗುರುವಾರ ವಿಡಿಯೋ ಸಂವಾದ ನಡೆಸಿ ಜಿಲ್ಲಾಡಳಿತದಿಂದ ಕರೊನಾ ನಿರ್ವಹಣೆ ಕುರಿತು ಸಮಗ್ರ ಮಾಹಿತಿ ಪಡೆದುರು. ಇದೇ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿಯೂ ಆದ ಡಿಸಿಎಂ ಗೋವಿಂದ ಕಾರಜೋಳ ಲಾಕ್ಡೌನ್ ಮುಂದುವರಿಸುವುದು ಒಳ್ಳೆಯದು ಎಂದಾಗ ಆರ್ಥಿಕ ಚಟುವಟಿಕೆಗೆ ಏನು ಮಾಡುವುದು? ಎಂದು ಸಿಎಂ ಬಿಎಸ್ವೈ ಪ್ರಶ್ನಿಸಿದ್ದಾರೆ.
ಲಾಕ್ಡೌನ್ ಮುಂದುವರಿಸುತ್ತಾ ಹೋದರೆ ಕಷ್ಟವಾಗಲಿದೆ, ಇದರ ಬದಲು ಹೆಚ್ಚುಹೆಚ್ಚು ಕರೊನಾ ಟೆಸ್ಟ್ ಮಾಡಿ, ನಿಯಂತ್ರಣಕ್ಕೆ ಲಾಕ್ಡೌನ್ ಹೊರತುಪಡಿಸಿ ಇತರ ಎಲ್ಲ ಕ್ರಮ ಕೈಗೊಳ್ಳಿ ಎಂದು ಸಿಎಂ ಸೂಚನೆ ನೀಡಿದ್ದಾರೆ.
ಜೂನ್ 14ರ ವರೆಗೆ ಲಾಕ್ಡೌನ್ ವಿಸ್ತರಿಸಿದ್ದು, ಮತ್ತೆ ಲಾಕ್ಡೌನ್ ವಿಸ್ತರಣೆ ಮಾಡಲು ಸಿಎಂ ಬಿಎಸ್ವೈಗೆ ಒಲವಿಲ್ಲ ಎನ್ನುವುದು ಇಂದಿನ ಸಭೆಯಲ್ಲಿ ಸ್ಪಷ್ಟವಾಗಿದೆ. ಕಠಿಣ ನಿಯಮದೊಂದಿಗೆ ಅನ್ಲಾಕ್ ಪ್ರಕ್ರಿಯೆ ಆರಂಭಿಸುವುದು ಬಹುತೇಕ ಖಚಿತವಾಗಿದೆ.