ನ್ಯೂಸ್

ಕರೊನಾ 4ನೇ ಅಲೆ ಆತಂಕ: ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಜತೆ ಪ್ರಧಾನಿ ಸಂವಾದ ಆರಂಭ

ಬೆಂಗಳೂರು: ದೇಶದಲ್ಲಿ ಕರೊನಾ ನಾಲ್ಕನೇ ಅಲೆ ಆತಂಕ ಹಿನ್ನೆಲೆ ಬುಧವಾರ ಬೆಳಗ್ಗೆ ಎಲ್ಲ ರಾಜಗ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಸಂವಾದ ನಡೆಸಿದರು. ಪ್ರಧಾನಿ ಜತೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡ ಹಾಜರಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳೂರು ಪ್ರವಾಸವನ್ನು ಮೊಟಕುಗೊಳಿಸಿ, ಸಿಎಂ ಗೃಹ ಕಚೇರಿ ಕೃಷ್ಣಾದಿಂದ ಮೋದಿ ಅವರ ವಿಡಿಯೋ ಕಾನ್ಫರೆನ್ಸ್​ನಲ್ಲಿ ಭಾಗವಹಿಸಿದ್ದಾರೆ. ಸಚಿವ ಡಾ.ಕೆ.ಸುಧಾಕರ್​ ವಿ.ಸೋಮಣ್ಣ, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಕೂಡ ಭಾಗಿಯಾಗಿದ್ದಾರೆ. ಸದ್ಯಕ್ಕೆ ಟಫ್​ ರೂಲ್ಸ್​ ಬೇಡ, ಲಸಿಕಾಕರಣ ಹೆಚ್ಚಿಸಿ, ಅರ್ಹರಿಗೆ ಬೂಸ್ಟರ್​ ಲಸಿಕೆ ನೀಡಿ, ಮಾಸ್ಕ್​-ಸಾಮಾಜಿಕ ಅಂತರ ನಿಯಮ ಪಾಲನೆ ಆಗಲಿ ಎಂದು ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.

ದೇಶದಲ್ಲಿ ಕರೊನಾದ ಸಂಭಾವ್ಯ ನಾಲ್ಕನೇ ಅಲೆಗೆ ತಡೆಹಾಕುವ ನಿಟ್ಟಿನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸುತ್ತಿರುವ ವಿಡಿಯೋ ಸಂವಾದ ಮಹತ್ವ ಪಡೆದುಕೊಂಡಿದೆ. ಥೈಲ್ಯಾಂಡ್, ಜಪಾನ್, ಹಾಂಕಾಂಗ್ ಸೇರಿ ಹಲವು ದೇಶಗಳಲ್ಲಿ ನಾಲ್ಕನೇ ಅಲೆ ಕಾಲಿಟ್ಟಿದೆ. ಇತ್ತ, ದೆಹಲಿ, ಹರಿಯಾಣ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳಲ್ಲಿ ಸೋಂಕು ಪ್ರಕರಣಗಳು ಏರುಗತಿಯಲ್ಲಿವೆ.

ಹಿಂದಿನ ಮೂರು ಅಲೆಗಳ ಅನುಭವದ ಪ್ರಕಾರ ಮುಂದಿನ ಮೂರ್ನಾಲ್ಕು ವಾರಗಳಲ್ಲಿ ರಾಜ್ಯದಲ್ಲೂ ಸೋಂಕು ಪ್ರಕರಣಗಳ ಏರಿಕೆ ಅಂದಾಜಿಸಲಾಗಿದೆ.ಈ ಹಿನ್ನೆಲೆಯಲ್ಲಿ ಬುಧವಾರದ ಸಭೆ ಕುತೂಹಲಕ್ಕೆಡೆ ಮಾಡಿಕೊಟ್ಟಿದೆ. 4ನೇ ಅಲೆ ಪ್ರವೇಶದ ಕುರಿತು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೊಸ ಪ್ರಭೇದಗಳಿಂದ ಉಂಟಾಗುವ ಸೋಂಕಿನ ಪರಿಣಾಮ, ತೀವ್ರತೆ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಆದರೆ ಕೇಂದ್ರ ಸರ್ಕಾರದ ಸೂಚನೆಯಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಂಡು, ಮಾಸ್ಕ್ ಕಡ್ಡಾಯ ಸೇರಿ ಹಲವು ನಿಯಮಗಳನ್ನು ಪಾಲಿಸಲು ಸಾರ್ವಜನಿಕರಿಗೆ ವಿನಂತಿಸಿದೆ.

ಮೋದಿಯವರು ವಿಡಿಯೋ ಸಂವಾದದಲ್ಲಿ ನೀಡಲಿರುವ ಸಲಹೆ-ಸೂಚನೆಗಳ ಆಧಾರದಲ್ಲಿ ಮತ್ತೊಂದು ಸಭೆ ನಡೆಸಿ, ಇನ್ನಷ್ಟು ಕ್ರಮಗಳ ಬಗ್ಗೆ ತೀರ್ಮಾನ ವಾಗಲಿದೆ ಎಂದು ಸೋಮವಾರದ ಸಭೆ ಬಳಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದರು.