ನ್ಯೂಸ್

ಅಯ್ಯನಗುಡಿ ಜಾತ್ರೆ ಮೇಲೆ ಕರೊನಾ ಛಾಯೆ: ಐತಿಹಾಸಿಕ ಕೆಂಗಲ್​ ದನಗಳ ಜಾತ್ರೆ ರದ್ದು

ಚನ್ನಪಟ್ಟಣ: ಕರೊನಾ ಹಿನ್ನೆಲೆಯಲ್ಲಿ ಈ ವರ್ಷವೂ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಪ್ರಸಿದ್ಧ ಕೆಂಗಲ್​ ಆಂಜನೇಯ ಸ್ವಾಮಿ ದನಗಳ ಜಾತ್ರೆ (ಅಯ್ಯನಗುಡಿ ಜಾತ್ರೆ) ರದ್ದಾಗಿದೆ. ಇದರೊಂದಿಗೆ ಐತಿಹಾಸಿಕ ಹಾಗೂ ವರ್ಷದ ಮೊದಲ ಜಾತ್ರೆ ಎಂದೇ ಖ್ಯಾತಿ ಪಡೆದಿದ್ದ ಕೆಂಗಲ್​ ಜಾತ್ರೆ ಕರೊನಾ ಮೂರನೇ ಅಲೆ ಭೀತಿಗೆ ಬಲಿಯಾಗಿದೆ.

ಕೋವಿಡ್​ ಹರಡುವಿಕೆ ತಡೆಯಲು ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ದೇವಾಲಯಗಳ ಜಾತ್ರೆ, ಉತ್ಸವ ರದ್ದುಗೊಳಿಸಿದೆ. ಇದರಿಂದಾಗಿ ದನಗಳ ಜಾತ್ರೆಗೆ ಸಹ ಜಿಲ್ಲಾಡಳಿತ ತಡೆ ಹಾಕಿದೆ. ಕೆಂಗಲ್​ ಜಾತ್ರೆಯನ್ನು ರದ್ದು ಮಾಡಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಈ ಜಾತ್ರೆ ಸಂಕ್ರಾಂತಿ ಹಬ್ಬದ ಹಿಂದಿನ ದಿನದಿಂದ ಆರಂಭಗೊಳ್ಳಬೇಕಿತ್ತು. ಆದರೆ, ಈ ವರ್ಷವೂ ಜಾತ್ರೆ ಹಾಗೂ ಅದ್ದೂರಿ ರಥೋತ್ಸವಕ್ಕೆ ಬ್ರೇಕ್​ ಹಾಕಿದ್ದು, ಜಾತ್ರೆ ಜತೆಗೆ ಭಕ್ತರ ಪ್ರವೇಶಕ್ಕೂ ನಿರ್ಬಂಧ ವಿಧಿಸಲಾಗಿದೆ. ರಥೋತ್ಸವ ಸೇರಿ ಧಾರ್ಮಿಕ ವಿಧಿವಿಧಾನಗಳು ಸಾಂಕೇತಿಕವಾಗಿ ನಡೆಯಲಿವೆ. ಈ ಜಾತ್ರೆಗೆ ರಾಮನಗರ ಜಿಲ್ಲೆಯ ರೈತರು ಮಾತ್ರವಲ್ಲದೆ ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ ಸೇರಿ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಿಂದಲೂ ರೈತರು ಆಗಮಿಸಿ ರಾಸುಗಳನ್ನು ಮಾರಾಟ ಮಾಡುತ್ತಿದ್ದರು. ಆದರೆ, ದನಗಳ ಜಾತ್ರೆ ರದ್ದಾಗಿರುವುದರಿಂದ ಈ ಬಾರಿ ರಾಸುಗಳ ಗೊರಸಿನ ಸಪ್ಪಳ ಕೇಳದಂತಾಗಿದೆ.