ಶಿಕಾರಿಪುರ: ಸಹಕಾರ ಸಂಘಗಳು ಶ್ರೀಸಾಮಾನ್ಯರಿಗೆ ಸೌಲಭ್ಯ ಒದಗಿಸುವ ಜತೆಗೆ ಆರ್ಥಿಕ ಶಕ್ತಿ ತುಂಬುತ್ತಿವೆ. ಕೃಷಿಕರ ಪಾಲಿಗೆ ಸಹಕಾರ ಸಂಸ್ಥೆಗಳು ವರದಾನ ಎಂದು ಹೊಸದುರ್ಗ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.
ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಜ್ರ ಮಹೋತ್ಸವದ ಪ್ರಯುಕ್ತ ಬುಧವಾರ ಏರ್ಪಡಿಸಿದ್ದ ವಾಣಿಜ್ಯ ಮಳಿಗೆಗಳ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲ್ ಅವರ ಶ್ರಮದಿಂದ ಸ್ವಾತಂತ್ರೃಪೂರ್ವದಿಂದಲೇ ಸಹಕಾರ ಚಿಂತನೆ ಆರಂಭವಾಯಿತು. ಅನೇಕರ ಕೊಡುಗೆಯಿಂದ ಇಂದು ದೇಶಾದ್ಯಂತ ಸಹಕಾರ ಕ್ಷೇತ್ರ ಹೆಮ್ಮರವಾಗಿ ಬೆಳೆದಿದೆ ಎಂದು ತಿಳಿಸಿದರು.
ತಾಲೂಕಿನಲ್ಲಿ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 81 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದು, ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಿರುವುದು ಒಳ್ಳೆಯ ಬೆಳವಣಿಗೆ. ಸಹಕಾರ ಕ್ಷೇತ್ರ ಇನ್ನಷ್ಟು ಬೆಳೆಯಲು ಸಕಾಲದಲ್ಲಿ ನಾವು ಸಾಲ ಮರುಪಾವತಿ ಮಾಡಬೇಕು. ದೇಶದ ವ್ಯವಸ್ಥೆ ಮತ್ತು ಅಭಿವೃದ್ಧಿಯಲ್ಲಿ ಆರ್ಥಿಕ ಸದೃಢತೆ ಬಹಳ ಮುಖ್ಯ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಶಿಕಾರಿಪುರದಲ್ಲಿ ಸಾಕಷ್ಟು ಸಹಕಾರ ಸಂಘಗಳು ಅದ್ಭುತವಾಗಿ ಕೆಲಸ ಮಾಡುತ್ತಿವೆ. ಸಹಕಾರ ಸಂಘಗಳು ಜನರಿಗೆ ಹೆಚ್ಚಿನ ಸೇವೆ ನೀಡುತ್ತಿವೆ. ಸಹಕಾರ ಸಂಘದ ಮೇಲೆ ಕೇಂದ್ರ ಸರ್ಕಾರ ಹಾಕುವ ತೆರಿಗೆ ವ್ಯವಸ್ಥೆ ವಾಪಸ್ ಪಡೆಯಬೇಕಿದೆ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಭದ್ರಾ ಕಾಡಾ ಮಾಜಿ ಅಧ್ಯಕ್ಷ ನಗರದ ಮಹಾದೇವಪ್ಪ, ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಡಗಿ ಪಾಲಾಕ್ಷ, ಉಪಾಧ್ಯಕ್ಷ ಡಿ.ಎಸ್.ಈಶ್ವರಪ್ಪ, ನಿರ್ದೇಶಕರಾದ ಸಂಕ್ರಿ ಚಂದ್ರಪ್ಪ, ಗೆಲುವಮ್ಮ ಕೃಷ್ಣಪ್ಪ, ನಗರದ ರವಿಕಿರಣ್, ಸರೋಜಮ್ಮ ಬಸವರಾಜಪ್ಪ, ಜಯಲಿಂಗಪ್ಪ, ಎಸ್.ಬಿ.ಸತೀಶ್, ಡಿ.ಆರ್.ಗಿರೀಶ್, ಹರಳೆಣ್ಣೆ ಗಿಡ್ಡಮ್ಮ, ಮಂಜಪ್ಪ, ಜಿ.ಗದಿಗೆಪ್ಪ, ಮ್ಯಾನೇಜರ್ ಸಣ್ಣನಿಂಗಪ್ಪ ಇತರರಿದ್ದರು.