ರಾಯಚೂರು: ನಗರದಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡ ಪ್ರಕರಣದಲ್ಲಿ ಮತ್ತೊಬ್ಬರ ಜೀವ ಬಲಿಯಾಗಿದೆ. ಈವರೆಗೂ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿಕೆ.
13ನೇ ವಾರ್ಡ್ನ ಯರಗೆರಾ ಕಾಲನಿ ನಿವಾಸಿ ಜನಕರಾಜ್(48) ಮೃತ ದುರ್ದೈವಿ. ಒಂದು ವಾರದದಿಂದ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜನಕರಾಜ್ ಚಿಕಿತ್ಸೆ ಫಲಿಸದೆ ಶುಕ್ರವಾರ(ಜೂ.10) ಕೊನೆಯುಸಿರೆಳೆದರು. ರಾಂಪುರ ಜಲಾಶಯದಿಂದ ನಗರದ 14 ವಾರ್ಡ್ಗಳಿಗೆ ನೀರನ್ನು ಶುದ್ಧೀಕರಿಸದೆ ಪೂರೈಕೆ ಮಾಡಿದ್ದು, ಮೇ 31ರಂದು ಈ ನೀರನ್ನು ಕುಡಿದ ನೂರಾರು ಮಂದಿ ಅಸ್ವಸ್ಥಗೊಂಡಿದ್ದರು. ಅಂದು ಇಂದಿರಾ ನಗರದ ಮಲ್ಲಮ್ಮ(40) ವಾಂತಿಯಿಂದ ಮೃತಪಟ್ಟಿದ್ದಳು. ಮಲ್ಲಮ್ಮ ಮೃತಪಟ್ಟ ಮೂರು ದಿನಕ್ಕೆ 7 ವಾರ್ಡ್ನ ಅಬ್ದುಲ್ ಗಫೂರ್(37), ಅರಬ್ ಮೊಹಲ್ಲಾದ ಮಹ್ಮದ ನೂರ್(43), ಜೂ.8ರಂದು ಅಂದ್ರೂನ್ ಕಿಲ್ಲಾ ಅಬ್ದುಲ್ ಕರೀಂ ಕೊನೆಯುಸಿರೆಳೆದಿದ್ದರು. ಇದೀಗ ಜನಕರಾಜ್ ಕೂಡ ಅಸುನೀಗಿದ್ದಾರೆ.
ಸರ್ಕಾರ, ಮೃತರ ಮೂರು ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದೆ. ನಗರಸಭೆಯು ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ನೀಡಲು ತೀರ್ಮಾನಿಸಿದೆ.