ನವದೆಹಲಿ: ಬಿಹಾರ ರಾಜಕೀಯವೀಗ ಕುತೂಹಲಕರ ತಿರುವು ಪಡೆದುಕೊಳ್ಳುತ್ತಿದೆ. ಮಾಜಿ ಕೇಂದ್ರ ಸಚಿವ, ಲೋಕಜನಶಕ್ತಿ ಪಕ್ಷದ ಸ್ಥಾಪಕ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಪುತ್ರ, ಜಮುಯ್ ಕ್ಷೇತ್ರದ ಸಂಸದ ಚಿರಾಗ್ ಪಾಸ್ವಾನ್ ತಮ್ಮದೇ ಪಕ್ಷದಲ್ಲಿ ಮೂಲೆಗುಂಪಾಗಿದ್ದಾರೆ. ಬಿಹಾರ ರಾಜಕಾರಣದ ಪಂಟರ್ ನಿತೀಶ್ರನ್ನೇ ಎದುರು ಹಾಕಿಕೊಂಡ ಚಿರಾಗ್, ಈಗ ನಿತೀಶರು ತೋಡಿದ ಖೆಡ್ಡಾದಲ್ಲಿ ಸಿಲುಕಿದ್ದಾರೆ. ಎಲ್ಜೆಪಿಯ 6 ಸಂಸದರಲ್ಲಿ ಐವರು ಚಿರಾಗ್ ವಿರುದ್ಧ ಬಂಡೆದಿದ್ದಾರೆ. ಇದ್ದ ಒಬ್ಬ ಶಾಸಕ ಕೂಡ ಜೆಡಿಯು ಪಾಲಾಗಿದ್ದಾರೆ.
| ರಾಘವ ಶರ್ಮ ನಿಡ್ಲೆ
2020ರ ರಾಜ್ಯ ವಿಧಾನಸಭೆ ಚುನಾವಣೆ ಬಳಿಕ ಸೂಕ್ತ ಸಮಯಕ್ಕೆ ಕಾದಿದ್ದ ನಿತೀಶ್, ಚಿರಾಗ್ಗೆ ಮರೆಯಲಾಗದ ಬಿಸಿಯೇಟನ್ನೇ ಕೊಟ್ಟಿದ್ದಾರೆ. ಎಲ್ಜೆಪಿ ಸಂಸದೀಯ ನಾಯಕ ಸ್ಥಾನ, ಪಕ್ಷದ ಅಧ್ಯಕ್ಷ ಸ್ಥಾನ ಎರಡೂ ಇಲ್ಲದ ಚಿರಾಗ್ ಒಂದರ್ಥದಲ್ಲಿ ಈಗ ಅನಾಥ. ರಾಮ್ ವಿಲಾಸ್ ಪಾಸ್ವಾನ್ ಸೋದರ, ಹಾಜಿಪುರ ಸಂಸದ ಪಶುಪತಿನಾಥ ಪರಸ್, ಮತ್ತೋರ್ವ ಸೋದರ ರಾಮಚಂದ್ರ ಪಾಸ್ವಾನ್ ಪುತ್ರ, ಸಮಸ್ತಿಪುರ ಸಂಸದ ಪ್ರಿನ್ಸ್ ರಾಜ್ ಇಬ್ಬರೂ ಚಿರಾಗ್ ರಕ್ತಸಂಬಂಧಿಗಳು. ಆದರೆ, ಪಶುಪತಿನಾಥ ಪರಸ್ಗೆ ನಿತೀಶ್ ಕುಮಾರ್ ಈಗ ವಿಕಾಸ ಪುರುಷರಾಗಿ ಕಾಣುತ್ತಿದ್ದಾರೆ. ಪರಸ್ ಅಥವಾ ಅವರ ಪುತ್ರನಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಖಚಿತ ಎನ್ನಲಾಗುತ್ತಿದೆ. ರಾಜ್ಯದಲ್ಲಿ ಶಾಸಕ ಬಲವಿಲ್ಲದಿದ್ದರೂ, ಎನ್ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಗೊಂಡು ರಾಜ್ಯದಲ್ಲೂ ಸರ್ಕಾರದ ಪಾಲುದಾರರಾದಲ್ಲಿ ಸಹಜವಾಗಿಯೇ ಅವರೆಲ್ಲರ ಬಲ ದ್ವಿಗುಣಗೊಳ್ಳಲಿದೆ.
ಅಷ್ಟಕ್ಕೂ ಎಲ್ಜೆಪಿ 2020ರಲ್ಲಿ ಎನ್ಡಿಎ ಮೈತ್ರಿಕೂಟ ತೊರೆದು, ಏಕಾಂಗಿಯಾಗಿ ಸ್ಪರ್ಧಿಸಿದ್ದೇ ನಿತೀಶ್ರನ್ನು ಹಣಿಯಬೇಕು ಎಂಬ ಉದ್ದೇಶಕ್ಕಾಗಿ. ಇದು ಚಿರಾಗ್ ಏಕಾಂಗಿ ನಿರ್ಧಾರ. ಇದಕ್ಕೆ ಪಕ್ಷದ ಹಿರಿಯ ನಾಯಕರ ವಿರೋಧವಿತ್ತು. ಆದರೆ, ಆಗ "ನಾನು ಪ್ರಧಾನಿ ಮೋದಿಯವರ ಹನುಮಾನ್' ಎಂದು ಹಾರಾಡಿದ್ದ ಚಿರಾಗ್ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ. 2020ರಲ್ಲಿ ಎನ್ಡಿಎ ಅಧಿಕಾರಕ್ಕೆ ಬಂದರೂ, ಜೆಡಿಯು ಮಾತ್ರ 43 ಕ್ಷೇತ್ರಗಳಿಗಷ್ಟೇ ಸೀಮಿತಗೊಂಡಿತು. 74 ಕ್ಷೇತ್ರಗಳನ್ನು ಬಾಚಿಕೊಂಡ ಬಿಜೆಪಿ ನಾಯಕರು, ನಿತೀಶ್ ಸ್ಥಿತಿ ಕಂಡು ಒಳಗಿಂದೊಳಗೇ ನಕ್ಕಿದ್ದರು. ವಾಸ್ತವದಲ್ಲಿ ನಿತೀಶ್ 43 ಸೀಟುಗಳಿಗೆ ಕುಸಿದಿದ್ದು ಎಲ್ಜೆಪಿ ಕಾರಣದಿಂದಲೇ. ಎಲ್ಜೆಪಿ ಸ್ಪರ್ಧೆ ಮಾಡಿದ್ದು ಒಟ್ಟು 144 ಕ್ಷೇತ್ರಗಳಲ್ಲಿ. ಜೆಡಿಯು ಸ್ಪರ್ಧಿಸಿದ್ದ 115 ಕ್ಷೇತ್ರಗಳ ಪೈಕಿ 113ರಲ್ಲಿ ಎಲ್ಜೆಪಿ ಅಭ್ಯರ್ಥಿಗಳನ್ನು ಹಾಕಿತ್ತು. ಇದರಿಂದಾಗಿ ಎನ್ಡಿಎ ಮತಗಳು ವಿಭಜನೆಗೊಂಡು ಆರ್ಜೆಡಿಗೆ ಲಾಭವಾಗಿತ್ತು. ಒಟ್ಟು 35 ಕ್ಷೇತ್ರಗಳಲ್ಲಿ ಜೆಡಿಯು ಮತ್ತು ಎಲ್ಜೆಪಿ ಪಡೆದ ಒಟ್ಟು ಮತಗಳು ಆರ್ಜೆಡಿಯ ಗೆದ್ದ ಅಭ್ಯರ್ಥಿಗಳಿಗಿಂತ ಹೆಚ್ಚಿವೆ. ಅಂದರೆ, ಎಲ್ಜೆಪಿ ಸ್ಪರ್ಧೆಯಿಂದಾಗಿ ಈ 35 ಹೆಚ್ಚುವರಿ ಸೀಟುಗಳು ಆರ್ಜೆಡಿ ಪಾಲಾದವು. ಉದಾಹರಣೆಗೆ & ದರ್ಭಂಗಾ ಗ್ರಾಮೀಣ ಕ್ಷೇತ್ರದಲ್ಲಿ ಆರ್ಜೆಡಿಯ ಲಲಿತ್ ಕುಮಾರ್ ಜೆಡಿಯು ಅಭ್ಯರ್ಥಿ ವಿರುದ್ಧ ಕೇವಲ 2141 ಮತಗಳ ಅಂತರದಲ್ಲಿ ಗೆದ್ದಿದ್ದರು. ಇಲ್ಲಿ ಎಲ್ಜೆಪಿಗೆ ಸಿಕ್ಕ ಮತಗಳು 17,605. ಮಹಾರಾಜ್ ಗಂಜ್ ಕ್ಷೇತ್ರದಲ್ಲಿ ಆರ್.ಜೆ.ಡಿ. ಗೆಲುವಿನ ಅಂತರ 1976 ಮತಗಳು. ಎಲ್ಜೆಪಿಗೆ ಸಿಕ್ಕಿದ್ದು 18,278 ಮತಗಳು.
ಎಲ್ಜೆಪಿ&ನಿತೀಶ್ ನಡುವಿನ ದ್ವೇಷ ಹೊಸದೇನಲ್ಲ. ರಾಮ್ ವಿಲಾಸ್ ಪಾಸ್ವಾನ್ ಒಡಲೊಳಗೆ ಕೂಡ ನಿತೀಶ್ ವಿರುದ್ಧ ಆಕ್ರೋಶ ಕುದಿಯುತ್ತಿತ್ತು. 2005ರಿಂದ 2020ರ ತನಕದ ಅಧಿಕಾರಾವಧಿಯಲ್ಲಿ ಪಾಸ್ವಾನ್ ಸಮುದಾಯವನ್ನು ರ್ನಿಲಕ್ಷಿಸಿದ ಗುರುತರ ಆರೋಪ ನಿತೀಶ್ ಮೇಲಿದೆ. ಅಲ್ಲದೆ 2005ರಲ್ಲಿ ಎಲ್ಜೆಪಿ 29 ಸೀಟುಗಳನ್ನು ಗೆದ್ದಿತ್ತಾದರೂ, ನಿತೀಶ್ ಆಮಿಷದಿಂದಾಗಿ 22 ಶಾಸಕರು ಜೆಡಿಯು ಸೇರ್ಪಡೆಯಾಗಿದ್ದರು. ನಂತರ ಅತಂತ್ರ ವಿಧಾನಸಭೆ ನಿಮಾರ್ಣವಾಗಿ ಅದೇ ವರ್ಷದ ನವೆಂಬರ್ ತಿಂಗಳ ಮರುಚುನಾವಣೆಯಲ್ಲಿ ಬಿಜೆಪಿ&-ಜೆಡಿಯು ಮೈತ್ರಿಕೂಟ 139 ಸೀಟು ಗೆದ್ದು ಸರ್ಕಾರ ರಚನೆ ಮಾಡಿತ್ತು. ಪಾಸ್ವಾನ್ಗೆ ಮರುಚುನಾವಣೆಯಲ್ಲಿ 10ಕ್ಕಿಂತ ಹೆಚ್ಚು ಸೀಟುಗಳೂ ಬರಲಿಲ್ಲ. ರಾಜ್ಯದ ಮಹಾದಲಿತ ಮತವರ್ಗದ ಜನಪ್ರಿಯತೆ ಗಳಿಸಲು ಮುಂದಾಗಿದ್ದ ನಿತಿಶ್, ಪಾಸ್ವಾನ್ ಸಮುದಾಯವನ್ನೂ ಮಹಾದಲಿತ ಕೆಟಗರಿಗೆ ಸೇರಿಸಿ ಎಂಬ ಬೇಡಿಕೆ ಒಪ್ಪಲಿಲ್ಲ. ಮಹಾದಲಿತರ ಪರ ಯೋಜನೆಗಳಿಗೆ ಅಗತ್ಯ ಹಣಕಾಸು ನೆರವು ಸಿಕ್ಕಿತು. ಪಾಸ್ವಾನ್ ಹೊರತುಪಡಿಸಿ ಉಳಿದೆಲ್ಲಾ ದಲಿತ ಸಮುದಾಯಗಳು ನಿತೀಶ್ರನ್ನು ಮೆಚ್ಚಿದವು. ನಿತೀಶ್ ತಂತ್ರಗಾರಿಕೆ ಯಿಂದಾಗಿ ರಾಮ್ ವಿಲಾಸ್ಗೆ ತನ್ನ ಸಮುದಾಯದಾಚೆಗೆ ವರ್ಚಸ್ಸು ಬೆಳೆಸಿಕೊಳ್ಳಲೂ ಸಾಧ್ಯ ವಾಗಲಿಲ್ಲ. 2020ರ ವಿಧಾನಸಭೆ ಚುನಾವಣೆಯಲ್ಲಿ ನಿತೀಶ್ಗೆ ಡ್ಯಾಮೇಜ್ ಮಾಡಿದ ಖುಷಿ ಚಿರಾಗ್ರಲ್ಲಿ ಕಂಡಿತ್ತು. ನಿತೀಶ್ ಕುಮಾರ್ ಈಗ ಅಪ್ಪ ಕಟ್ಟಿದ ಪಕ್ಷದಲ್ಲೇ ಮಗನಿಗೆ ಸ್ಥಾನವಿಲ್ಲದಂತೆ ಮಾಡಿದ್ದಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರ ಸಿಗುವುದರಿಂದ ಎಲ್ಜೆಪಿ ಸಂಸದರಿನ್ನು ನಿತೀಶ್ ತಾಳಕ್ಕೆ ಹೆಜ್ಜೆ ಹಾಕಲಿದ್ದಾರೆ. ಚಿರಾಗ್ ಈಗ ಪಕ್ಷದ ಚಿಹ್ನೆಗಾಗಿ ಹೋರಾಡಬೇಕಿದೆ. ಅದನ್ನೂ ಕಳೆದುಕೊಂಡರೆ ಭವಿಷ್ಯದ ಹಾದಿ ಮತ್ತಷ್ಟು ಕಠಿಣವೆನಿಸಲಿದೆ.
ಇಬ್ಭಾಗಕ್ಕೆ ಜೆಡಿಯು ಕಾರಣ
ನವದೆಹಲಿ: ಪಕ್ಷ ಇಬ್ಭಾಗ ಆಗುವುದಕ್ಕೆ ಜೆಡಿಯು ನಡೆಸಿದ ಪಿತೂರಿಯೇ ಕಾರಣ ಎಂದು ಲೋಕ ಜನಶಕ್ತಿ ಪಕ್ಷದ (ಎಲ್ಜೆಪಿ) ಯುವ ನಾಯಕ ಚಿರಾಗ್ ಪಾಸ್ವಾನ್ ದೂರಿದ್ದಾರೆ. ತಾವು ಟೈಾಯ್ಡ್ನಿಂದ ಬಳಲುತ್ತಿದ್ದ ವೇಳೆ ಜೆಡಿಯು ಮುಖಂಡರು ಸಂಚು ನಡೆಸಿ ತಮ್ಮ ಸೋದರ ಸಂಬಂಧಿಯನ್ನು ಎತ್ತಿಕಟ್ಟಿದ್ದಾರೆ. ಇದರಿಂದಲೇ ಪಕ್ಷ ಹೈಜಾಕ್ ಆಯಿತು ಎಂದು ಕಿಡಿಕಾರಿದ್ದಾರೆ. ಚಿರಾಗ್ರ ಸಂಬಂಧಿಯಾದ ಪಶುಪತಿನಾಥ ಕುಮಾರ್ ಪರಸ್ರನ್ನು ಲೋಕಸಭೆಯಲ್ಲಿ ಎಲ್ಜೆಪಿ ನಾಯಕನ್ನಾಗಿ ಆಯ್ಕೆ ಮಾಡಿದ ನಂತರ ಚಿರಾಗ್ರನ್ನು ಪಕ್ಷದಿಂದ ಹೊರಹಾಕಲಾಗಿದೆ.
ಪೈಲಟ್ ಬೆಂಬಲಿಗರಿಗೆ 3 ಸಚಿವ ಸ್ಥಾನ?
ಜೈಪುರ: ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಬೆಂಬಲಿಗರಿಗೆ 3 ಸಚಿವ ಸ್ಥಾನ ಮತ್ತು ಕೆಲವರಿಗೆ ಪಕ್ಷದಲ್ಲಿ ಉನ್ನತ ಹುದ್ದೆ ಹಾಗೂ ನಿಗಮ& ಮಂಡಳಿಗಳಿಗೆ ನೇಮಕ ಮಾಡುವ ಪ್ರಸ್ತಾವವನ್ನು ಸಿಎಂ ಅಶೋಕ್ ಗೆಹ್ಲೋಟ್ ಬಣ ಮುಂದಿಟ್ಟಿದೆ ಎನ್ನಲಾಗಿದೆ. ಸಚಿನ್ ಪೈಲಟ್ ಕಳೆದ ವಾರ ದೆಹಲಿಗೆ ಹೋಗಿ ಬಂದ ಮೇಲೆ ಈ ಬೆಳವಣಿಗೆ ನಡೆದಿದೆ.
ಬಿಜೆಪಿಯ 30 ಶಾಸಕರ ಮೇಲೆ ರಾಯ್ ಕಣ್ಣು
ಕೋಲ್ಕತ: ಬಿಜೆಪಿ ಬಿಟ್ಟು ಮತ್ತೆ ಟಿಎಂಸಿ ಸೇರಿರುವ ಮುಕುಲ್ ರಾಯ್, ತಮ್ಮ ವಿಶ್ವಾಸದಲ್ಲಿರುವ ಮತ್ತು ಬಿಜೆಪಿಯಿಂದ ಶಾಸಕರಾಗಿರುವ 25ರಿಂದ 30 ಮಂದಿಯನ್ನು ಮತ್ತೆ ಟಿಎಂಸಿಗೆ ಕರೆತರುವ ಪ್ರಯತ್ನದಲ್ಲಿದ್ದಾರೆ. ಈ ಶಾಸಕರ ಜತೆ ದೂರವಾಣಿ ಮೂಲಕ ಸಂಪರ್ಕದಲ್ಲಿರುವುದಾಗಿ ರಾಯ್ ಮತ್ತು ಅವರ ಮಗ ಸುಭ್ರಾಂಗ್ಶು ರಾಯ್ ಹೇಳಿದ್ದಾರೆ. ಬಿಜೆಪಿಯ ಇಬ್ಬರು ಸಂಸದರು ಕೂಡ ತಮ್ಮ ಸಂಪರ್ಕದಲ್ಲಿದ್ದು, ಟಿಎಂಸಿಗೆ ಬರಲು ಉತ್ಸುಕರಾಗಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ. "ಇವರೆಲ್ಲ ಮೂಲತ@ ಟಿಎಂಸಿಯ ನಾಯಕರೇ. ಕೆಲ ತಿಂಗಳ ಹಿಂದೆ ಅವರು ಬಿಜೆಪಿ ಸೇರಿದ್ದರು. ಈಗ ರ್ವಾಪ್ಸಿಗೆ ಸಿದ್ಧರಾಗಿದ್ದಾರೆ' ಎಂದು ಸುಭ್ರಾಂಗ್ಶು ಹೇಳಿದ್ದಾರೆ.
* ಪಶ್ಚಿಮ ಬಂಗಾಳದ ಚುನಾವಣೆ ವೇಳೆ ಪ್ರಚೋದನಾಕಾರಿ ಭಾಷಣ ಮಾಡಿದ ಪ್ರಕರಣದ ಸಂಬಂಧ ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿಯನ್ನು ಕೋಲ್ಕತ ಪೊಲೀಸರು ಬುಧವಾರ ವರ್ಚುವಲ್ ಮೂಲಕ ವಿಚಾರಣೆಗೆ ಗುರಿಪಡಿಸಿದ್ದರು.
* ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಮತ್ತು ಮುಖಂಡ ನವಜೋತ್ ಸಿಂಗ್ ಸಿಧು ಅವರಿಗೆ ಜೂನ್ 20ಕ್ಕೆ ದೆಹಲಿಗೆ ಬರುವಂತೆ ಪಕ್ಷದ ಅಧ್ಯೆ ಸೋನಿಯಾ ಗಾಂಧಿ ಸೂಚಿಸಿದ್ದಾರೆ.