ಕೋಲಾರ: ಸದ್ಯಕ್ಕೆ ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಶ್ನೆ ಇಲ್ಲ, ಸಿದ್ದರಾಮಯ್ಯ ಅವರೇ ಮುಂದುವರಿಯಲಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಸ್ಪಷ್ಟಪಡಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಹೈಕಮಾಂಡ್, ಸಚಿವರು, ಶಾಸಕರು ಸಿಎಂಗೆ ಬೆಂಬಲವಾಗಿದ್ದಾರೆ. ೧೩೫ ಶಾಸಕರನ್ನು ಹೊಂದಿರುವ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ವಿರೋಽಗಳಿಂದ ನಡೆಯುತ್ತಿದೆ ಎಂದು ಕಿಡಿಕಾರಿದರು.
ಸಿಎಂ ರಾಜೀನಾಮೆ ಪ್ರಸಂಗ ಉದ್ಭವವಾಗಿಲ್ಲ. ಕಾಂಗ್ರೆಸ್ ಹಿರಿಯ ಮುಖಂಡ ದೇಶಪಾಂಡೆ ಅವರ ಹೇಳಿಕೆಯನ್ನು ನಾನು ನೋಡಿಲ್ಲ, ಎಲ್ಲರೂ ಒಟ್ಟಿಗೆ ಇದ್ದೇವೆ. ಈ ಬಗ್ಗೆ ಚರ್ಚೆ ನಡೆದಿಲ್ಲ, ರಾಜಕಾರಣದಲ್ಲಿ ಆಸೆ ಪಡುವುದು ಸಹಜ ಎಂದ ಅವರು, ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಸಿಎಂ ರಾಜೀನಾಮೆ ಕೇಳುವ ನೈತಿಕತೆ ಇಲ್ಲ ಎಂದರು.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳ ಪಾತ್ರ ಏನೆಂದು ನ್ಯಾಯಾಧೀಶರೇ ಪ್ರಶ್ನೆ ಮಾಡಿದ್ದಾರೆ. ಆದರೂ, ಡಿಸೆಂಬರ್ ಒಳಗೆ ಸರ್ಕಾರ ಬೀಳಿಸುವುದೇ ಬಿಜೆಪಿ, ಜೆಡಿಎಸ್ ಕನಸಾಗಿದೆ ಎಂದರು.
ಗವರ್ನರ್ ಬರದಿರುವುದು ಗೊತ್ತಿಲ್ಲ
ರಾಜ್ಯಪಾಲರು ಬೆಂಗಳೂರು ಉತ್ತರ ವಿವಿ ಘಟಿಕೋತ್ಸವಕ್ಕೆ ಬಾರದೆ ಇರುವ ಬಗ್ಗೆ ನನಗೆ ಗೊತ್ತಿಲ್ಲ, ಕಾಂಗ್ರೆಸ್‌ನವರು ಪ್ರತಿಭಟನೆ ಹಮ್ಮಿಕೊಂಡಿದ್ದ ವಿಚಾರವೂ ಗಮನಕ್ಕಿಲ್ಲ ಎಂದು ಸಚಿವರು ಹೇಳಿದರು.
ಬಿಜೆಪಿ ಸರ್ಕಾರಕ್ಕಿರಲಿಲ್ಲ ಇಚ್ಛಾಶಕ್ತಿ
ಎತ್ತಿನಹೊಳೆ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಸಾಕಷ್ಟು ಅಡೆತಡೆ ಉಂಟಾದವು. ಬಯಲು ಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಬೇಕು ಎಂಬುದು ಯೋಜನೆಯ ಮೂಲ ಉದ್ದೇಶ. ಯೋಜನೆಗೆ ಎದುರಾಗಿದ್ದ ಸಮಸ್ಯೆಗಳನ್ನು ಬಗೆಹರಿಸಲು ಕಳೆದ ಬಿಜೆಪಿ ಸರ್ಕಾರದಲ್ಲಿ ಇಚ್ಛಾಶಕ್ತಿ ಕೊರತೆಯಿತ್ತು. ಬೈರಗೊಂಡ್ಲು ಸಮೀಪ ಭೂ ಸ್ವಾಧೀನ ಸೇರಿ ಇತರ ಸಮಸ್ಯೆ ಬಗೆಹರಿಸಲಿಲ್ಲ. ಈಗ ನಮ್ಮ ಸರ್ಕಾರ ಆಸಕ್ತಿ ತೆಗೆದುಕೊಂಡು ಸಮಸ್ಯೆಗಳಿಗೆ ಪರಿಹಾರ ತೆಗೆದುಕೊಂಡು ಉದ್ಘಾಟನೆಗೆ ದಿನಾಂಕ ನಿಗದಿ ಮಾಡಿದೆ. ಗೌರಿಬಿದನೂರು ಭಾಗದಲ್ಲಿ ಪೈಪ್‌ಲೈನ್ ಕೆಲಸ ನಡೆಯುತ್ತಿದ್ದು, ಮುಂದಿನ ವರ್ಷದೊಳಗೆ ಜಿಲ್ಲೆಯ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಎಂ.ಸಿ.ಸುಧಾಕರ್ ಹೇಳಿದರು.
ಡಿಸಿಸಿ ಬ್ಯಾಂಕ್ ಚುನಾವಣೆಗೆ ಅಡ್ಡಿಯಿಲ್ಲ
ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕನ್ನು ಕೋಮುಲ್ ಮಾದರಿಯಲ್ಲಿ ವಿಭಜನೆ ಮಾಡಬೇಕು ಎಂಬ ಉದ್ದೇಶ ಇದೆ. ಆದರೆ ನಬಾರ್ಡ್ ಒಪ್ಪುತ್ತಿಲ್ಲ. ಚೇಳೂರು, ಮಂಚೇನಹಳ್ಳಿ ತಾಲೂಕುಗಳಿಗೆ ನಿರ್ದೇಶಕ ಸ್ಥಾನ ಕಲ್ಪಿಸಬೇಕು ಎಂದು ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸ್ಥಾನ ತೆಗೆದು ಹಾಕಿದರು. ೧೩ಡಿ ಪಾಲನೆ ಆಗಿರಲಿಲ್ಲ, ಈ ರೀತಿ ನಾನಾ ಕಾರಣಗಳಿಂದ ಚುನಾವಣೆ ತಡವಾಗುತ್ತದೆ. ಚುನಾವಣೆ ನಡೆಯಬೇಕು ಎಂಬುದು ನಮ್ಮೆಲ್ಲರ ಆಶಯ, ಎರಡೂ ಹೊರ ತಾಲೂಕುಗಳನ್ನು ಸೇರಿಸಿಕೊಂಡು ಚುನಾವಣೆ ನಡೆಸಲಿ ಎಂದು ಸಚಿವರು ಹೇಳಿದರು.
ಸ್ವಿಮಿಂಗ್ ಪೂಲ್‌ನಲ್ಲಿ ಈಜಾಡುತ್ತಿದ್ದರು
ಕರೊನಾ ವೇಳೆ ರಾಜ್ಯದಲ್ಲಿ ಕೋಟಿಗಟ್ಟಲೇ ಅವ್ಯವಹಾರ ಆಗಿದೆ, ಈ ಬಗ್ಗೆ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆದಿದ್ದು, ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಿದ್ದಾರೆ. ಈ ವಿಚಾರದಲ್ಲಿ ಎಷ್ಟೇ ದೊಡ್ಡವರಾಗಿದ್ದರೂ ಶಿಕ್ಷೆಯಾಗುವುದು ಖಚಿತ. ಡಾ.ಕೆ.ಸುಧಾಕರ್ ಅವರು ಕೋವಿಡ್ ಕಾಲದಲ್ಲಿ ಜನರ ಸಮಸ್ಯೆಗೆ ಸ್ಪಂದಿಸಲಿಲ್ಲ, ಸ್ವಿಮಿಂಗ್ ಪೂಲ್‌ನಲ್ಲಿ ಈಜಾಡಿಕೊಂಡಿದ್ದರು ಎಂದು ಆರೋಪಿಸಿದರು.