ನ್ಯೂಸ್

ಧರ್ಮಸ್ಥಳಕ್ಕೆ ಅಪಪ್ರಚಾರ ಕೆಟ್ಟ ಹೆಸರು ತರುವ ಹುನ್ನಾರ

ಶಿವಮೊಗ್ಗ : ಹಿಂದುಗಳ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದ ಬಗ್ಗೆ ನಿರಂತರ ಅಪಪ್ರಚಾರ ನಡೆಸುತ್ತ, ವೀರೇಂದ್ರ ಹೆಗ್ಗಡೆ ಅವರಿಗೆ ಕೆಟ್ಟ ಹೆಸರು ತರುವ ಹುನ್ನಾರ ನಡೆಯುತ್ತಿದೆ. ಅದರ ವಿರುದ್ಧ ರಾಷ್ಟ್ರಭಕ್ತರ ಬಳಗದಿಂದ ಧರ್ಮಸ್ಥಳಕ್ಕೆ ಶಿವಮೊಗ್ಗದಿಂದ ಧರ್ಮರಕ್ಷಾ ಜಾಥಾ ಹೊರಟಿದ್ದೇವೆ ಎಂದು ಮಾಜಿ ಡಿಸಿಎಂ ಹಾಗೂ ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಹೇಳಿದರು.

ಮಂಗಳವಾರ ನಗರದಲ್ಲಿ ಧರ್ಮಸ್ಥಳಕ್ಕೆ ಧರ್ಮರಕ್ಷಾ ಜಾಥಾಕ್ಕೆ ಚಾಲನೆ ನೀಡಿ, ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ದೇವಾಲಯವನ್ನು ಪ್ರಾಣ ತೆತ್ತಾದರೂ ಉಳಿಸಿಕೊಳ್ಳುತ್ತೇವೆ. ಹಿಂದುಗಳಿಗೆ ಅದು ಪವಿತ್ರ ಕ್ಷೇತ್ರ. ಇದರ ವಿರುದ್ಧ ಷಡ್ಯಂತ್ರ ಮಾಡಿದವರಿಗೆ ದೇಶ-ವಿದೇಶಗಳಿಂದ ಹಣ ಹರಿದು ಬರುತ್ತಿದೆ. ಇದರ ಮೂಲ ಕಂಡುಹಿಡಿದು ಅಪಪ್ರಚಾರ ಮಾಡುವವರಿಗೆ ತಕ್ಕಪಾಠ ಕಲಿಸಲು ಎಸ್‌ಐಟಿ ತನಿಖೆ ಸಾಕಾಗುವುದಿಲ್ಲ. ಇದನ್ನು ಎನ್‌ಐಎಗೆ ವಹಿಸಬೇಕು ಎಂದು ಆಗ್ರಹಿಸಿದರು.

ಸುಮಾರು 250ಕ್ಕೂ ಹೆಚ್ಚು ಕಾರುಗಳಲ್ಲಿ ಮತ್ತು 5 ಟಿಟಿ ವಾಹನಗಳಲ್ಲಿ ರಾಷ್ಟ್ರಭಕ್ತರು ಮತ್ತು ಪುಣ್ಯಕ್ಷೇತ್ರದ ಭಕ್ತರು ಧರ್ಮಸ್ಥಳಕ್ಕೆ ಹೊರಟಿದ್ದೇವೆ. ಧರ್ಮವನ್ನು ಉಳಿಸಲು, ಕುತಂತ್ರಿಗಳ ಷಡ್ಯಂತ್ರ ಬಯಲು ಮಾಡಲು, ವಿರೇಂದ್ರ ಹೆಗ್ಗಡೆಯವರಿಗೆ ಧೈರ್ಯ ತುಂಬಿ ನೈತಿಕ ಬೆಂಬಲ ವ್ಯಕ್ತಪಡಿಸಲು ಈ ಯಾತ್ರೆ ಕೈಗೊಂಡಿದ್ದೇವೆ ಎಂದರು.

ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಕೆ.ಇ.ಕಾಂತೇಶ್, ಇ.ವಿಶ್ವಾಸ್, ಎಂ.ಜಿ.ಬಾಲು, ವಾಸವಿ ವಿದ್ಯಾಲಯದ ಕಾರ್ಯದರ್ಶಿ ಎಸ್.ಕೆ.ಶೇಷಾಚಲ ಮುಂತಾದವರಿದ್ದರು.