ಕೋಝಿಕ್ಕೋಡ್(ಕೇರಳ): ಕಾಂಗ್ರೆಸ್ನ ಹಿರಿಯ ನಾಯಕ, ಮಾಜಿ ಸಚಿವ ಆರ್ಯಾದನ್ ಮುಹಮ್ಮದ್ (87) ಇಂದು ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ನಿಲಂಬೂರು ಕ್ಷೇತ್ರದಿಂದ 8 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು ಮೂರು ಬಾರಿ ಸಚಿವರಾಗಿದ್ದರು.
ಅನಾರೋಗ್ಯದಿಂದ ಬಳಲುತ್ತಿದ್ದ ಆರ್ಯಾದನ್ ಅವರು ಒಂದು ವಾರದಿಂದ ಕೋಝಿಕ್ಕೋಡ್ನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿಲಂಬೂರಿನ ಅವರ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಪಾರ್ಥಿವ ಶರೀರ ಇಡಲಾಗಿದೆ. ನಾಳೆ (ಸೋಮವಾರ) ಬೆಳಗ್ಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
1935ರ ಮೇ 15 ರಂದು ನಿಲಂಬೂರಿನಲ್ಲಿ ಜನಿಸಿದ ಆರ್ಯಾದನ್ ಮುಹಮ್ಮದ್, ಅವರು ಅದೇ ಕ್ಷೇತ್ರದಲ್ಲಿ ಚುನಾವಣೆಗೆ ನಿಂತು ಹಲವು ಬಾರಿ ಗೆಲುವಿನ ನಗೆ ಬೀರಿದ್ದರು. ರೇಡ್ ಯೂನಿಯನ್ ಚಟುವಟಿಕೆಗಳ ಮೂಲಕ ರಾಜಕೀಯ ಪ್ರವೇಶಿಸಿದ ಅವರು, 1952ರಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾದರು. ಕೆಪಿಸಿಸಿಯಲ್ಲಿ ಸದಸ್ಯ, ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು. 1977ರಲ್ಲಿ ನಿಲಂಬೂರು ವಿಧಾನಸಭೆ ಕ್ಷೇತ್ರದಿಂದ ಮೊದಲ ಬಾರಿಗೆ ಗೆದ್ದ ಆರ್ಯಾದನ್, 1980, 1987, 1991, 1996, 2001, 2006 ಮತ್ತು 2011ರ ಚುನಾವಣೆಯಲ್ಲೂ ಗೆದ್ದು ಬೀಗಿದ್ದರು. ಒಟ್ಟು 8 ಬಾರಿ ಶಾಸಕರಾಗಿದ್ದರು.ಮೂರು ಬಾರಿ ಸಚಿವರಾಗಿದ್ದ ಆರ್ಯಾದನ್ ಅವರು ಕಾರ್ಮಿಕ, ಅರಣ್ಯ, ಪ್ರವಾಸೋದ್ಯಮ ಮತ್ತು ಇಂಧನ ಇಲಾಖೆಯ ಜವಾಬ್ದಾರಿ ನಿರ್ವಹಿಸಿದ್ದರು.