ಮೈಸೂರು: ಶಿವಮೊಗ್ಗದಲ್ಲಿ ಶಂಕಿತ ಉಗ್ರರಿಬ್ಬರನ್ನು ಪೊಲೀಸರು ಬಂಧಿಸಿದ್ದು, ಉಗ್ರ ಸಂಟನೆಗಳೊಂದಿಗೆ ನಿರಂತರ ಸಂಪರ್ಕ ಹೊಂದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಇದು ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದೆ. ಆದರೆ, ಈ ಕುರಿತು ಪ್ರತಿಕ್ರಿಯಿಸಿದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್, ಶಿವಮೊಗ್ಗದ ಯುವಕರು ಐಸಿಸ್ ಸಂಘಟನೆಯೊಂದಿಗೆ ನಂಟು ಹೊಂದಲು ನಿರುದ್ಯೋಗ ಸಮಸ್ಯೆ ಕಾರಣ ಎಂದು ವ್ಯಾಖ್ಯಾನಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಲಪಾಡ್, ನಿರುದ್ಯೋಗದಿಂದ ರಾಜ್ಯದಲ್ಲಿ ಯುವಕರು ತಪ್ಪು ದಾರಿಯಲ್ಲಿ ಹೋಗುತ್ತಿದ್ದಾರೆ. ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿಸಲು ವಿಫಲವಾಗಿದೆ. ಇದಕ್ಕೆ ಈ ಸರ್ಕಾರವೇ ಹೊಣೆ. ಕೆಲಸ ಸಿಕ್ಕಿದ್ದರೆ ಯುವಕರು ತಪ್ಪು ದಾರಿ ತುಳಿಯುವ ಯೋಚನೆ ಮಾಡುತ್ತಿರಲಿಲ್ಲ. ಐಸಿಸ್ ಸಂಪರ್ಕದಲ್ಲಿ ಇರುವವರನ್ನು ಭಾರತದಲ್ಲಿ ಇಟ್ಟುಕೊಳ್ಳಬೇಡಿ, ಅವರಿಗೆ ಗಲ್ಲು ಶಿಕ್ಷೆ ಕೊಡಿ ಎಂದು ಆಗ್ರಹಿಸಿದರು.
2023ರವರೆಗೆ ಯುವಕರು ತಾಳ್ಮೆಯಿಂದ ಇರಬೇಕು. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಆ ಸಂದರ್ಭ ರಾಜ್ಯದಲ್ಲಿ ಸುವರ್ಣ ಕಾಲ ನಿರ್ಮಾಣ ಆಗಲಿದೆ. ಹಾಗಾಗಿ ಯುವಕರು ತಪ್ಪು ದಾರಿ ತುಳಿಯುವ ಕಾರ್ಯ ಮಾಡಬಾರದು ಎಂದರು.