ರಾಯಲ್ಪಾಡು: ಗ್ರಾಮೀಣ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಹಾಗೂ ಮೂಲಸೌಲಭ್ಯ ಕೊರತೆಯಿಂದ ರೋಗಿಗಳು, ಸಾರ್ವಜನಿಕರು ತೊಂದರೆ ಅನುಭವಿಸುವುದನ್ನು ಕೇಳಿರುತ್ತೇವೆ, ಆದರೆ ಇದಕ್ಕೆ ಅಪವಾದ ಎಂಬಂತೆ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಪ್ರಾಥಮಿಕ ಆರೋಗ್ಯ ಕೇಂದ್ರವು ವೈದ್ಯ, ಸಿಬ್ಬಂದಿಯ ನಿರಂತರ ಸೇವೆ ಹಾಗೂ ಸಮರ್ಪಕ ಮೂಲ ಸೌಲಭ್ಯಗಳಿಂದ ರೋಗಿಗಳಿಗೆ ಉತ್ತಮ ಸೇವೆ ನೀಡಿ ಮಾದರಿಯಾಗಿದೆ.
ಆರೋಗ್ಯ ಕೇಂದ್ರಕ್ಕೆ ಪ್ರತಿದಿನ ನೂರಾರು ರೋಗಿಗಳು ಆಗಮಿಸುತ್ತಾರೆ. ಬಂದವರನ್ನು ವೈದ್ಯರು ಸರಿಯಾಗಿ ವಿಚಾರಿಸಿ, ಅವರಿಗೆ ಸೂಕ್ತ ಚಿಕಿತ್ಸೆಗೆ ನೀಡಿ ಜನಸ್ನೇಹಿಯಾಗಿದ್ದಾರೆ. ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವ ಜನರ ಮಧ್ಯೆ ಇಲ್ಲಿನ ವೈದ್ಯರ ಆರೈಕೆ ಹಾಗೂ ಉಪಾಚಾರ ಕಂಡು ಹೆಚ್ಚಿನ ರೋಗಿಗಳು ಆಗಮಿಸುತ್ತಾರೆ. ಆಂಧ್ರದ ಹಳ್ಳಿಗಳ ಜನರೂ ಈ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳುತ್ತಾರೆ.
ವೈದ್ಯ ಸಿಬ್ಬಂದಿ: ಆರೋಗ್ಯ ಕೇಂದ್ರದಲ್ಲಿ ಒಟ್ಟು 16 ಕೊಠಡಿಗಳಿವೆ. ರೋಗಿಗಳ ಉಪಚಾರಕ್ಕೆಂದು 15 ಜನ ಮೆಡಿಕಲ್ ಆಫೀಸರ್ ಸೇರಿ ವೈದ್ಯ ಸಿಬ್ಬಂದಿ ಇದ್ದಾರೆ. ಇದರಲ್ಲಿ ಮೂವರು ಶುಶ್ರೂಷಕಿಯರು, ಎನ್ಎಂಎಸ್ 2, ಸಿಎಚ್ಒ -2, ಪಿಎಚ್ಸಿಒ-2, ಎಚ್ಐಒ-2, ನರ್ಸಿಂಗ್ ಆಫೀಸರ್ಸ್-3, ಗ್ರೂಪ್ "ಡಿ'-2, ಲ್ಯಾಬ್ ಟೆಕ್ನಿನಿಷೇನ್ -1,ಫಾರ್ಮಸಿ ಆಫೀಸರ್ -1 ಡಿಂಕ್ ಆಪರೇಟರ್-1 ಸೇರಿದಂತೆ 13 ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ರಾತ್ರಿ ಪಾಳಿದಲ್ಲಿ ಒಬ್ಬರು ನರ್ಸ್ ಹಾಗೂ ಒಬ್ಬರು "ಡಿ' ಗ್ರೂಪ್ ನೌಕರರು ಕೆಲಸ ನಿರ್ವಹಿಸುತ್ತಾರೆ.
ಸುಸಜ್ಜಿತ ಸೌಲಭ್ಯಗಳು: ಆರೋಗ್ಯ ಕೇಂದ್ರವು ಸುಸ್ಜಜಿತ ಸೌಲಭ್ಯಗಳನ್ನು ಹೊಂದಿದೆ. ರೋಗಿಗಳ ತುರ್ತು ಚಿಕಿತ್ಸೆಗೆ ಸೇರಿದಂತೆ ಅನುಕೂಲವಾದ ವ್ಯವಸ್ಥೆಗಳನ್ನು ಹೊಂದಿದೆ. ಆರೋಗ್ಯ ಕೇಂದ್ರದಲ್ಲಿ ತುರ್ತು ಚಿಕಿತ್ಸಾ ವಿಭಾಗ, ವೈದ್ಯಕಿಯ ವಿಭಾಗ, ಶಸ ಚಿಕಿತ್ಸೆ, ಪ್ರಸೂತಿ ಮತ್ತು ಸಿ ರೋಗ ಚಿಕಿತ್ಸೆ, ಡ್ರೆಸ್ಸಿಂಗ್, ಚುಚ್ಚುಮದ್ದು, ಹೋರ ರೋಗಿ ವಿಭಾಗ, ತಾಯಿ ಆರೋಗ್ಯ, ನವಜಾತ ಶಿಶು ಆರೈಕೆ, ಮಕ್ಕಳ ಆರೋಗ್ಯ , ಹದಿಹರೆಯದವರ ಚಿಕಿತ್ಸೆ, ಪ್ರಯೋಗಾಲಯ ಸೇವೆಗಳಿವೆ. ಹೆಮಟಾಲಜಿ, ಬಯೋಕೆಮಿಸ್ಟ್ರಿ, ಸಿರಾಲಜಿ, ಐಸಿಟಿಸಿ, ವಾಟರ್ ಅನಾಲಿಸಿಸ್, ಮೈಕ್ರೋಸ್ಕೋಪಿಕ್ ಪ್ರಯೋಗಾಲಯಗಳನ್ನು ಹೊಂದಿದೆ. ರೋಗಿಗಳಿಗೆ ಅನುಕೂಲವಾಗಿದೆ. ಹೀಗಾಗಿ ಹೆಚ್ಚಿನವರು ಇದೇ ಆಸ್ಪತ್ರೆಗೆ ಚಿಕಿತ್ಸೆಗೆ ಆಗಮಿಸುತ್ತಾರೆ. ಆಸ್ಪತ್ರೆಯ ಪರಿಸರ ಉತ್ತಮ ಪರಿಸರ ಹೊಂದಿದೆ.
ಕಾಯಕಲ್ಪ ಪ್ರಶಸ್ತಿ: ಆರೋಗ್ಯ ಕೇಂದ್ರದ ವೈದ್ಯರು, ಸಿಬ್ಬಂದಿ ಸೇವೆ ಗುರುತಿಸಿ 2021ರಲ್ಲಿ ರಾಜ್ಯ ಸರ್ಕಾರ ಕಾಯಕಲ್ಪ ಪ್ರಶಸ್ತಿ ನೀಡಿ ಗೌರವಿಸಿದೆ. ಕೇಂದ್ರದ ಸೇವೆ ಕುರಿತು ಈ ಕೇಂದ್ರಕ್ಕೆ 5 ವರ್ಷಗಳ ಹಿಂದೆ ಇಂಡೋ-ಚೈನಾದ ಫ್ರೆಂಡ್ಶಿಫ್ ಆಸೋಸಿಯೇಶನ್ನಿಂದ ಚೀನಾದ 30 ವೈದ್ಯರು ಭೇಟಿ ನೀಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು. 4 ವರ್ಷದ ಹಿಂದೆ ಮೋದಿಕೇರ್ ಸಹಯೋಗದಲ್ಲಿ ಯುಎಸ್ ವರದಿಗಾರರು ಭೇಟಿ ನೀಡಿದ್ದರು ಎಂದು ಆರೋಗ್ಯ ಕೇಂದ್ರದ ವೈದ್ಯೆ ಡಾ.ಕೆ.ಆರ್.ಕವಿತಾ ಮಾಹಿತಿ ನೀಡಿದರು.