ಶಿವಮೊಗ್ಗ: ಇವರು ವೃತ್ತಿಯಲ್ಲಿ ನೇತ್ರ ತಜ್ಞೆ. ವೈದ್ಯಕೀಯ ಉಪಕರಣಗಳನ್ನು ಎಷ್ಟು ನಾಜೂಕಾಗಿ ಬಳಸುತ್ತಾರೋ, ಅಷ್ಟೇ ಸೂಕ್ಷ್ಮವಾಗಿ ಇವರ ಕೈಯಲ್ಲಿ ರಂಗೋಲಿ ಅರಳುತ್ತದೆ.
ಎಂಬಿಬಿಎಸ್, ಪಿಜಿ ಪೂರ್ಣಗೊಳಿಸಿ ವೃತ್ತಿ, ಕುಟುಂಬ ನಿರ್ವಹಣೆ ಜತೆಗೆ ನಾಲ್ಕು ವರ್ಷಗಳಿಂದ ನಿರಂತರವಾಗಿ ಮನೆ ಮುಂದೆ ಅತ್ಯಾಕರ್ಷಕ ರಂಗೋಲಿ ಬಿಡಿಸುತ್ತಾರೆ. ಹಬ್ಬಹರಿದಿನಗಳಲ್ಲಿ ಮಾತ್ರವಲ್ಲದೆ, ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಚಾರಧಾರೆಗಳಿಗೂ ಈ ನೇತ್ರ ತಜ್ಞೆ ರಂಗೋಲಿಗಳ ಮೂಲಕ ಅಭಿವ್ಯಕ್ತಪಡಿಸಿದ್ದಾರೆ. ಇಂತಹ ಕಲೆ ಕರಗತ ಮಾಡಿಕೊಂಡವರು ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಯ ಡಾ. ಕಮಲಾ ಮಹೇಶ್.
ಪ್ರತಿದಿನ ಮನೆ ಮುಂದೆ ರಂಗೋಲಿ ಹಾಕಲು ರಾಗ ಎಳೆಯುವವರೇ ಹೆಚ್ಚು. ಇಂಥವರ ನಡುವೆ ಕಮಲಾ ವಿಭಿನ್ನವಾಗಿ ಕಾಣಿಸುತ್ತಾರೆ. ಬಾಲ್ಯದಲ್ಲೇ ವಿಭಿನ್ನವಾಗಿ ರಂಗೋಲಿ ಹಾಕುವುದನ್ನು ಮೈಗೂಡಿಸಿಕೊಂಡಿದ್ದ ಇವರು ವಿವಾಹವಾದ ಬಳಿಕ ಕೆಲ ವರ್ಷ ನಿಲ್ಲಿಸಿದ್ದರು. 2020ರಲ್ಲಿ ಕರೊನಾ ಸಂದರ್ಭದಲ್ಲಿ ಮನೆಯಲ್ಲೇ ಇರುತ್ತಿದ್ದ ಕಮಲಾ ಅವರಿಗೆ ಸಂಬಂಧಿ(ಅತ್ತಿಗೆ) ನೀಡಿದ ಸಲಹೆ ರಂಗೋಲಿ ಹಾಕುವುದನ್ನು ಮುಂದುವರಿಸಲು ಪ್ರೇರಣೆ ನೀಡಿತ್ತು.
ಏನೇನು ವಿಶೇಷ?: ಗಣೇಶ ಹಬ್ಬ, ದಸರಾ, ಲಕ್ಷ್ಮೀ ಪೂಜೆ, ವಿಜ್ಞಾನಕ್ಕೆ ಸಂಬಂಧಿಸಿದ ವಿಶೇಷ ದಿನಗಳು, ಕ್ರೀಡಾಪಟುಗಳು, ಖ್ಯಾತ ಗಾಯಕರು ಸೇರಿ ವಿವಿಧ ಗಣ್ಯರ ಜನ್ಮದಿನ, ಅವರ ವಿಶೇಷ ಸಾಧನೆಗಳು, ಅಂತಾರಾಷ್ಟ್ರೀಯ ಶಾಂತಿ ದಿನ, ವಿಶ್ವ ಹೃದಯ ದಿನ, ಪರಿಸರ ದಿನವನ್ನು ರಂಗೋಲಿ ಮೂಲಕ ಅಭಿವ್ಯಕ್ತಪಡಿಸುತ್ತಾರೆ.
ಮನಸ್ಸಿಗೆ ಖುಷಿ: ರಂಗೋಲಿ ಹಾಕುವುದು ಕೇವಲ ಹವ್ಯಾಸವಾಗಿಲ್ಲ. ಪ್ರತಿದಿನ ನಾನಾ ಬಗೆಯ ರಂಗೋಲಿ ಹಾಕುವುದರಿಂದ ಮನಸ್ಸಿಗೆ ಖುಷಿ ಸಿಗುತ್ತದೆ. ತಾಳ್ಮೆ, ಸೃಜನಶೀಲತೆಯನ್ನು ಕಲಿಸುತ್ತದೆ. ಜೀವನ ಶೈಲಿಯಲ್ಲಿ ಬದಲಾವಣೆ ಕಾಣಬಹುದು. ಅದರಲ್ಲೂ ವಿಷ್ಣು, ಲಕ್ಷ್ಮೀ ಸೇರಿದಂತೆ ದೇವರ ರಂಗೋಲಿ ಹಾಕುವಾಗ ಮೈ ರೋಮಾಂಚನಗೊಳ್ಳುತ್ತದೆ ಎನ್ನುತ್ತಾರೆ ವೈದ್ಯೆ ಕಮಲಾ.
ವಾಟ್ಸ್‌ಆ್ಯಪ್ ಗ್ರೂಪ್ ರಚನೆ: ಸಮಾನ ಮನಸ್ಕರು, ಆತ್ಮೀಯರು ಸೇರಿ ವಾಟ್ಸ್‌ಆ್ಯಪ್ ಗ್ರೂಪ್ ಮಾಡಿಕೊಂಡಿದ್ದು ಪ್ರತಿನಿತ್ಯ ರಂಗೋಲಿ ಬಿಡಿಸಿ ಫೋಟೊ ತೆಗೆದು ಆ ಗ್ರೂಪ್‌ಗೆ ಶೇರ್ ಮಾಡಲಾಗುತ್ತದೆ. ಆ ಗ್ರೂಪ್‌ನಲ್ಲಿ ಸುಮಾರು 80 ಸದಸ್ಯರಿದ್ದು ಸಮಯ ಸಿಕ್ಕಾಗ ರಂಗೋಲಿ ಹಾಕಿ, ಅದಕ್ಕೆ ಬಣ್ಣ ತುಂಬಿ ಅತ್ಯಾಕರ್ಷಕವಾಗಿ ಕಾಣುವಂತೆ ಮಾಡಿ ಆ ಗ್ರೂಪ್‌ಗೆ ಹಾಕುತ್ತಾರೆ. ಅಲ್ಲಿ ಬರುವ ಫೋಟೊಗಳಲ್ಲಿನ ರಂಗೋಲಿ ನೋಡಿ ಹಲವರಿಗೆ ಪ್ರೇರಣೆಯಾಗಿದೆ ಎನ್ನುತ್ತಾರೆ ನೇತ್ರ ತಜ್ಞೆ.