ನ್ಯೂಸ್

ಹಿಜಾಬ್​ ಕೇಸ್​​ನಲ್ಲಿ ಸುಪ್ರೀಂ ದ್ವಿಸದಸ್ಯ ಪೀಠದ ಭಿನ್ನ ತೀರ್ಪು ಕುರಿತು ಸಿಎಂ ಏನಂದ್ರು?

ಬೆಂಗಳೂರು: ಹಿಜಾಬ್​ ಬ್ಯಾನ್​ ಕುರಿತು ಕರ್ನಾಟಕ ಹೈಕೋರ್ಟ್​ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿಗಳನ್ನು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌ ದ್ವಿಸದಸ್ಯ ಪೀಠ, ಇಂದು(ಗುರುವಾರ) ವಿಭಿನ್ನ ತೀರ್ಪು ಪ್ರಕಟಿಸಿದೆ. ಈ ಕುರಿತು ಸುದ್ದಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಇದು ದೇಶದ ವಿಚಾರ. ವಿದ್ಯಾರ್ಥಿಗಳ ಬೇಡಿಕೆ, ನಮ್ಮ ವಿಚಾರಗಳು ಸೇರಿದಂತೆ ಹತ್ತು ಹಲವು ವಿಚಾರಗಳಿವೆ. ಲಿಖಿತವಾಗಿ ಜಡ್ಜ್​ಮೆಂಟ್​ ಕಾಪಿಯನ್ನು ನೋಡಿದ ಬಳಿಕ ಉತ್ತರಿಸುವೆ ಎಂದರು.

ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿ, ಹಿಜಾಬ್ ಬಗ್ಗೆ ಸರ್ಕಾರದ ನಿಲುವಿನಲ್ಲಿ ಬದಲಾವಣೆ ಇರಲ್ಲ. ಶಾಲೆಗೆ ಬರುವವರು ಸಮವಸ್ತ್ರ ಪಾಲನೆ ಮಾಡಬೇಕು. ಇದು ನಿಯಮವಾಗಿದೆ. ಇದರ ವಿರುದ್ಧವಾಗಿ ಕೆಲವು ವಿದ್ಯಾರ್ಥಿಗಳು ಕೋರ್ಟ್​ಗೆ ಹೋಗಿದ್ದಾರೆ. ಹೈಕೋರ್ಟ್​ನ ತೀರ್ಪು ಸರ್ಕಾರದ ಪರವಾಗಿ ಬಂದಿತ್ತು. ಇದೀಗ ಸುಪ್ರೀಂ ಕೋರ್ಟ್​ನಲ್ಲಿ ಭಿನ್ನ ತೀರ್ಪು ಬಂದಿದೆ. ಇವಾಗ ಸಿಜೆ ಬೆಂಚ್​ಗೆ ವರ್ಗಾವಣೆ ಆಗಿದ್ದು, ಅಲ್ಲಿಯೂ ಸರ್ಕಾರದ ನಿಲುವು ಇದೇ ಬರಲಿದೆ. ವಿದ್ಯಾರ್ಥಿಗಳು ಮನೆಯಲ್ಲಿ ಯಾವ ವಸ್ತ್ರ ಬೇಕಿದ್ದರೂ ಹಾಕಲಿ. ಶಾಲೆಗೆ ಬರುವಾಗ ಸಮವಸ್ತ್ರ ಕಡ್ಡಾಯ ಎಂದರು.

ದ್ವಿಸದಸ್ಯ ಪೀಠ ವಿಭಿನ್ನ ಅಭಿಪ್ರಾಯ ನೀಡಿದ್ದು, ಅದನ್ನು ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ. ಸಮಾನತೆಗೆ, ಸಂವಿಧಾನಕ್ಕೆ ಆದ್ಯತೆ ಕೊಡಬೇಕು. ಐದು ಅಥವಾ ಏಳು ಜನರ ನ್ಯಾಯಾಧೀಶರ ತೀರ್ಪು ಏನಾಗಲಿದೆ ಎಂಬುದನ್ನ ಕಾದು ನೋಡಬೇಕು ಎಂದು ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.

ಸುಪ್ರೀಂಕೋರ್ಟ್‌ ದ್ವಿಸದಸ್ಯ ಪೀಠದಲ್ಲಿದ್ದ ಓರ್ವ ನ್ಯಾಯಮೂರ್ತಿ ಮುಸ್ಲಿಂ ವಿದ್ಯಾರ್ಥಿನಿಯರ ಮೇಲ್ಮನವಿಯನ್ನು ವಜಾಗೊಳಿಸಿದರೆ, ಇನ್ನೊರ್ವರು ಹೈಕೋರ್ಟ್​ ಆದೇಶವನ್ನೇ ರದ್ದು ಮಾಡಿದ್ದಾರೆ. ಇದೀಗ ಹಿಜಾಬ್​ ಪ್ರಕರಣವನ್ನು ಸಿಜೆಐ ಪೀಠಕ್ಕೆ ವರ್ಗಾಯಿಸಲಾಗಿದೆ. ನ್ಯಾಯಪೀಠದ ಸದಸ್ಯ ನ್ಯಾಯಮೂರ್ತಿ ಹೇಮಂತ್​ ಗುಪ್ತಾ ಅವರು ಮುಸ್ಲಿಂ ವಿದ್ಯಾರ್ಥಿನಿಯರ ಮೇಲ್ಮನವಿಯನ್ನು ವಜಾಗೊಳಸಿದರೆ, ಮತ್ತೋರ್ವ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು ಹಿಬಾಜ್​ ಬ್ಯಾನ್​ ಮಾಡಿ ಹೈಕೋರ್ಟ್​ ಹೊರಡಿಸಿದ್ದ ಆದೇಶವನ್ನೇ ರದ್ದು ಮಾಡಿದರು.

ಇನ್ನು ಈ ಪ್ರಕರಣದಲ್ಲಿ ಹಿಜಾಬ್​ ಪರ 17 ವಕೀಲರು ವಾದಿಸಿದ್ದರೆ, ಶಾಲೆಗಳಲ್ಲಿ ಹಿಜಾಬ್​ ಧಾರಣೆ ವಿರೋಧಿಸುವ ರಾಜ್ಯ ಸರ್ಕಾರದ ಆದೇಶ ಸಮರ್ಥಿಸಿ ಕೇಂದ್ರದ ಸಾಲಿಸಿಟರ್​ ಜನರಲ್​ ತುಷಾರ್​ ಮೆಹ್ತಾ, ಹೆಚ್ಚುವರಿ ಸಾಲಿಸಿಟರ್​ ಜನರಲ್​ ಕೆಎಂ ನಟರಾಜ್​, ರಾಜ್ಯ ಅಡ್ವೊಕೇಟ್​ ಜನರಲ್​ ಪ್ರಭುಲಿಂಗ ನಾವದಗಿ, ಶಾಲೆಗಳ ಶಿಕ್ಷಕರ ಪರ ಹಿರಿಯ ವಕೀಲ ಆರ್​. ವೆಂಕಟರಮಣಿ (ಹಾಲಿ ಅಟಾರ್ನಿ ಜನರಲ್​) ವಾದಿಸಿದ್ದರು. 10 ದಿನಗಳ ಕಾಲ ಸುದೀರ್ಘ ವಿಚಾರಣೆ ಕೈಗೊಂಡಿದ್ದ ನ್ಯಾಯಪೀಠ, ಸೆ.22ರಂದು ತೀರ್ಪು ಕಾದಿರಿಸಿತ್ತು. ಇಂದು ನ್ಯಾಯಮೂರ್ತಿಗಳಲ್ಲೇ ವಿಭಿನ್ನ ತೀರ್ಪು ಪ್ರಕಟವಾಗಿದ್ದು, ಜನರಲ್ಲಿನ ಗೊಂದಲ ಮತ್ತಷ್ಟು ಹೆಚ್ಚಾಗಿದೆ.