ನ್ಯೂಸ್

ಶುದ್ಧ ಕುಡಿಯುವ ನೀರಿನ ಘಟಕಕ್ಕೆ ದುರಸ್ತಿ ಭಾಗ್ಯವಿಲ್ಲ

ಹಾದನೂರು ಚಂದ್ರ ಸರಗೂರು
ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಾಲ್ಕೈದು ವರ್ಷಗಳೇ ಕಳೆದರೂ ಸಂಬಂಧಪಟ್ಟವರು ದುರಸ್ತಿಗೊಳಿಸದೆ ಪಟ್ಟಣದ ನಿವಾಸಿಗಳು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ.

ಇಲ್ಲಿನ ನಾಲ್ಕನೇ ವಾರ್ಡಿನಲ್ಲಿ ದೊರಕುವ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಿದ್ದು, ಜನರು ಲವಣಾಂಶ ತುಂಬಿದ ನೀರನ್ನು ಕುಡಿದು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಆದರೆ, ಇಲ್ಲಿನ ಆಡಳಿತ ವ್ಯವಸ್ಥೆ ಮಾತ್ರ ನೀರಿನ ಘಟಕ ದುರಸ್ತಿಗೊಳಿಸುವ ಗೋಜಿಗೆ ಹೋಗುತ್ತಿಲ್ಲ.

ನಾಲ್ಕನೇ ವಾರ್ಡಿನಲ್ಲಿ ಈ ಹಿಂದೆ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕ ಹೊರತು ಪಡಿಸಿದರೆ, ಬೇರಾವುದೇ ಶುದ್ಧ ನೀರಿನ ಘಟಕ ಇಲ್ಲ. ಇರುವ ಒಂದು ಶುದ್ಧ ನೀರಿನ ಘಟಕ ದುರಸ್ತಿಗೊಳಿಸಲು ವಿಫಲವಾಗಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಂತಿದೆ. ಪಟ್ಟಣದ ಜನತೆ ಅನಿವಾರ್ಯವಾಗಿ ಕಬಿನಿ ನದಿಯನ್ನು ಕುಡಿಯುವ ನೀರಿಗಾಗಿ ಅವಲಂಬಿಸಿದ್ದಾರೆ. ನದಿಯಲ್ಲಿ ಮಳೆ ಬಂದರೆ ಮಣ್ಣು ಮಿಶ್ರಿತ ನೀರು ಹರಿದು ಬರುತ್ತಿದ್ದು, ಕುಡಿಯಲು ಯೋಗ್ಯವಾಗಿಲ್ಲ.

ಬೀದಿ ನಾಯಿಗಳ ವಾಸಸ್ಥಾನ: ಕೆಟ್ಟು ನಿಂತಿರುವ ಶುದ್ಧ ನೀರಿನ ಘಟಕ ಸದ್ಯ ಬೀದಿ ನಾಯಿಗಳ ಆವಾಸ ಸ್ಥಾನವಾಗಿದೆ. ಘಟಕದ ನಿರ್ವಹಣೆ ಇಲ್ಲದೆ ಬೀದಿನಾಯಿಗಳು ಇಲ್ಲಿ ವಾಸಿಸುತ್ತಿವೆ. ಘಟಕ ಅಶುಚಿತ್ವದಿಂದ ಗಬ್ಬುನಾರುತ್ತಿದ್ದು, ನಿವಾಸಿಗಳು ತಿರುಗಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ಲಕ್ಷಾಂತರ ರೂ. ವಿನಿಯೋಗಿಸಿ ನಿರ್ಮಿಸಿದ ಘಟಕ ಸರಿಯಾಗಿ ಒಂದು ವರ್ಷವೂ ಕಾರ್ಯನಿರ್ವಹಿಸಿಲ್ಲ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.

ಎಷ್ಟೇ ಮನವಿ ಮಾಡಿದರೂ ಪ್ರಯೋಜನವಿಲ್ಲ: ಸರ್ಕಾರದಿಂದ ಲಕ್ಷಾಂತರ ರೂ. ವ್ಯಯಿಸಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೊಳಿಸುವಂತೆ ನೀರು ನೈರ್ಮಲ್ಯ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ನೇರವಾಗಿ ನದಿ ನೀರು ಕುಡಿಯುತ್ತಿರುವುದರಿಂದ ಮಕ್ಕಳಲ್ಲಿ ನೆಗಡಿ, ಕೆಮ್ಮು, ಜ್ವರ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ. ಕೆಲವರು ಟ್ಯಾಂಕರ್ ನೀರಿಗೆ ಅವಲಂಬಿಸುವಂತಾಗಿದೆ. ಪಪಂ ಅಧಿಕಾರಿಗಳು ನೀರು ಸರಬರಾಜಿಗೆ ಕ್ರಮವಹಿಸಬೇಕಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಇನ್ನಾದರೂ ಗಮನಹರಿಸಬೇಕು ಎಂಬೂದು ಇಲ್ಲಿನವರ ಒತ್ತಾಯ.