ನ್ಯೂಸ್

ಪಾದ್ರಿಯಿಂದ ಅತ್ಯಾಚಾರ...ದೂರು ದಾಖಲಿಸಿಕೊಳ್ಳಲು ಪೊಲೀಸರ ಹಿಂದೇಟು; ಯುವತಿಯ ಗೋಳು

ತಿರುಪತಿ: ಚರ್ಚ್​ ಪಾದ್ರಿಯೋರ್ವ 20 ವರ್ಷದ ಯುವತಿಯನ್ನು ಅತ್ಯಾಚಾರ ಮಾಡಿದ ಹೀನಾಯ ಘಟನೆ ತಿರುಪತಿಯ ತುಕಿವಕಂ ಗ್ರಾಮದಲ್ಲಿ ನಡೆದಿದೆ.

ಪಾದ್ರಿ ಯುವತಿಯನ್ನು ಅತ್ಯಾಚಾರ ಮಾಡಿದ್ದಲ್ಲದೆ, ಆಕೆಗೆ ಕ್ರೂರವಾಗಿ ಥಳಿಸಿದ್ದಾನೆ. ಇದರಿಂದ ಆಕೆ ಗಂಭೀರವಾಗಿ ಗಾಯಗೊಂಡಿದ್ದು, ತಿರುಪತಿಯ ಹೆರಿಗೆ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಾದ್ರಿ ಯುವತಿಯನ್ನು ಅತ್ಯಾಚಾರ ಮಾಡಿದ ಪ್ರಕರಣ ಬೆಳಕಿಗೆ ಬಂದಿದ್ದು ಐಡಿಡಬ್ಲ್ಯೂಎ ಮತ್ತು ಡಿವೈಎಫ್‌ಐ ಎನ್​ಜಿಒಗಳ ಚಿತ್ತೂರು ಜಿಲ್ಲಾ ವಿಭಾಗದಿಂದ. ಎನ್​​ಜಿಒ ಸಿಬ್ಬಂದಿ ಆಸ್ಪತ್ರೆಯಲ್ಲಿರುವ ಸಂತ್ರಸ್ತ ಯುವತಿಯನ್ನು ಭೇಟಿಯಾಗಿ, ನ್ಯಾಯಕ್ಕಾಗಿ ಹೋರಾಡುವ ಭರವಸೆ ನೀಡಿದ್ದಾರೆ.

ಈ ಯುವತಿ ಖಾಸಗಿ ಮಾರ್ಕೆಟಿಂಗ್ ಕಂಪನಿಯೊಂದರಲ್ಲಿ ಸೇಲ್ಸ್​ ಗರ್ಲ್​ ಆಗಿ ಕೆಲಸ ಮಾಡುತ್ತಿದ್ದಳು. ಆ ಕಂಪನಿ ಪಾದ್ರಿ ದೇವಶ್ಯಾಮ್​ಗೆ ಸೇರಿದ್ದಾಗಿತ್ತು. ಅಕ್ಟೋಬರ್​ 3ರಂದು ರಾತ್ರಿ 7ಗಂಟೆಗೆ ಯುವತಿ ತಿರುಪತಿ ರೆನಿಗುಂಟಾ ರಸ್ತೆಯಲ್ಲಿ ಹೋಗುತ್ತಿರುವಾಗ ಕಾರಿನಲ್ಲಿ ಬಂದ ಪಾದ್ರಿ, ಆಕೆಯನ್ನು ಮನೆ ಮುಟ್ಟಿಸುವುದಾಗಿ ಹೇಳಿ ಕಾರಿನಲ್ಲಿ ಹತ್ತಿಸಿಕೊಂಡ. ತುಕಿವಕಂ ಗ್ರಾಮದ ನಿರ್ಜನ ಪ್ರದೇಶವಾದ ರಾಯಲ್​ ಸೈಕಾಮ್​ ಲೇಔಟ್​ ನಲ್ಲಿ ಯುವತಿಯನ್ನು ಅತ್ಯಾಚಾರ ಮಾಡಿದ್ದಾನೆ. ಈ ವಿಚಾರಗಳನ್ನು ಆಕೆಯೇ ಬಾಯ್ಬಿಟ್ಟಿದ್ದಾಳೆ.

ಅತ್ಯಾಚಾರಕ್ಕೆ ಒಳಗಾದ ಯುವತಿ ದಿಶಾ ಪೊಲೀಸ್​ ಠಾಣೆಗೆ ದೂರು ನೀಡಿದ್ದಾಳೆ. ಆದರೆ ಅವರು ದೂರು ಸ್ವೀಕರಿಸದೆ, ತಿರುಪತಿ ಪೂರ್ವ ಪೊಲೀಸ್​ ಸ್ಟೇಶನ್​ಗೆ ಹೋಗಿ ಕಂಪ್ಲೇಂಟ್​ ಕೊಡುವಂತೆ ಹೇಳಿದ್ದಾರೆ. ಅಲ್ಲೂ ಸಹ ಪೊಲೀಸರು ಸಂತ್ರಸ್ತೆಯ ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ. ಅತ್ಯಾಚಾರ ನಡೆದ ಜಾಗ ನಮ್ಮ ವ್ಯಾಪ್ತಿಗೆ ಬರುವುದೇ ಇಲ್ಲ. ಹಾಗಾಗಿ ಎಫ್​ಐಆರ್ ದಾಖಲಿಸುವುದಿಲ್ಲ ಎಂದು ಹೇಳಿ ನುಣುಚಿಕೊಂಡಿದ್ದಾರೆ.

ಪೊಲೀಸರ ಈ ನಿರ್ಲಕ್ಷ್ಯದಿಂದ ಬೇಸತ್ತ ಯುವತಿ ನಂತರ ತಿರುಪತಿ ನಗರ ಎಎಸ್​ಪಿ ಸುಪ್ರಜಾ ಅವರನ್ನು ಸ್ಪಂದನಾ ಕಾರ್ಯಕ್ರಮದಲ್ಲಿ ಭೇಟಿಯಾಗಿ, ತನಗಾದ ಅನ್ಯಾಯವನ್ನು ಹೇಳಿಕೊಂಡಿದ್ದಾಳೆ. ಅದಕ್ಕೆ ಕೂಡಲೇ ಸ್ಪಂದಿಸಿದ ಎಎಸ್​ಪಿ, ಗಜುಲಮಂಡ್ಯಂ ಎಸ್‌ಐಗೆ ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಿದ ಬಳಿಕ ಇದೀಗ, ಅಂದರೆ ಘಟನೆ ನಡೆದು ಒಂದು ವಾರದ ಬಳಿಕ ಪ್ರಕರಣ ದಾಖಲಾಗಿದೆ.

ಇದಾದ ಬಳಿಕ ಹಲವು ಮಹಿಳಾ ಸಂಘಟನೆಗಳು, ಎನ್​ಜಿಒಗಳು ಸಂತ್ರಸ್ತೆಯ ನೆರವಿಗೆ ನಿಂತಿದ್ದು, ನ್ಯಾಯಕ್ಕಾಗಿ ಹೋರಾಡುವ ಭರವಸೆ ನೀಡಿವೆ.