ನ್ಯೂಸ್

ಜನರ ಗುಂಪಿನ ಮೇಲೆ ಹರಿದ ಶಾಸಕರ ಕಾರು! ಪೊಲೀಸರು, ಪತ್ರಕರ್ತರು ಸೇರಿ 22 ಮಂದಿ ಗಾಯ

arunakunigal

ಒಡಿಶಾ: ಜನರ ಮೇಲೆಯೇ ಶಾಸಕರ ಕಾರು ಹರಿದು 22ಕ್ಕೂ ಹೆಚ್ಚು ಮಂದಿ ಗಾಯಗೊಂಡ ದುರ್ಘಟನೆ ಶನಿವಾರ ಒಡಿಶಾದ ಖುರ್ದಾ ಜಿಲ್ಲೆಯ ಬಾನಾಪುರದಲ್ಲಿ ಸಂಭವಿಸಿದೆ. ಗಾಯಾಳುಗಳ ಪೈಕಿ ಐವರ ಸ್ಥಿತಿ ಗಂಭೀರವಾಗಿದೆ.

ಬಿಜೆಡಿ ಶಾಸಕ ಪ್ರಶಾಂತ್ ಜಗದೇವ್ ಅವರ ಕಾರು ಜನರ ಗುಂಪಿನ ಮೇಲೆ ಏಕಾಏಕಿ ಹರಿದ ಪರಿಣಾಮ ಘಟನೆಯಲ್ಲಿ ಬಾಣಾಪುರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಆರ್​.ಆರ್. ಸಾಹು ಸೇರಿದಂತೆ 7 ಪೊಲೀಸ್ ಸಿಬ್ಬಂದಿ, ಪತ್ರಕರ್ತರು ಸೇರಿ 22ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡವರನ್ನು ಭುವನೇಶ್ವರದ ಏಮ್ಸ್‌ಗೆ ಕರೆದೊಯ್ಯಲಾಗಿದೆ.

ಬ್ಲಾಕ್ ಅಧ್ಯಕ್ಷರ ಆಯ್ಕೆಗೆ ಬಾನಾಪುರದಲ್ಲಿ ಶನಿವಾರ ಚುನಾವಣೆ ನಡೆಯುತ್ತಿತ್ತು. ಈ ವೇಳೆ ಕಚೇರಿ ಹೊರಗೆ ಜನರ ಗುಂಪು ಸೇರಿತ್ತು. ಈ ವೇಳೆ ಏಕಾಏಕಿ ಕಾರು ಚಲಾಯಿಸಿದ ಪರಿಣಾಮ ಕಾರು ಜನರ ಮೇಲೆ ಹರಿದಿದೆ. ಈ ದುರ್ಘಟನೆಯಲ್ಲಿ ಚಿಲಿಕಾ ಕ್ಷೇತ್ರದ ಶಾಸಕ ಪ್ರಶಾಂತ್ ಜಗದೇವ್ ಅವರೂ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಕಳೆದ ವರ್ಷ ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಪ್ರಶಾಂತ್​ ಜಗದೇವ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು.