ನ್ಯೂಸ್

ಚಿರತೆ ದಾಳಿ: ಪ್ರಾಣ ಪಣಕ್ಕಿಟ್ಟು ಮನೆ ಮಾಲೀಕನನ್ನು ರಕ್ಷಿಸಿದ ಶ್ವಾನಗಳು

arunakunigal

ಶಿವಮೊಗ್ಗ: ನಿಯತ್ತಿಗೆ ಮತ್ತೊಂದು ಹೆಸರೇ ಶ್ವಾನಗಳು ಎಂದರೆ ತಪ್ಪಾಗಲಿಕ್ಕಿಲ್ಲ. ಶ್ವಾನಗಳು ಮನೆ ಕಾಯುವ ಜತೆಗೆ ಮನೆ ಸದಸ್ಯರನ್ನು ತನ್ನ ಪ್ರಾಣ ಪಣಕ್ಕಿಟ್ಟು ಕಾಡುಪ್ರಾಣಿಗಳಿಂದ ಕಾಪಾಡುತ್ತವೆ ಎಂಬ ಮಾತಿಗೆ ಸೊರಬ ತಾಲೂಕಿನ ಆನವಟ್ಟಿ ಸಮೀಪದ ಎಣ್ಣೆಕೊಪ್ಪದಲ್ಲಿ ಮಾಲೀಕನನ್ನು ಶ್ವಾನಗಳು ಚಿರತೆಯಿಂದ ಕಾಪಾಡಿರುವುದೇ ತಾಜಾ ಉದಾಹರಣೆ.

ಹೌದು, ಕಟ್ಟಿಗೆ ತರಲು ಕಾಡಿಗೆ ತೆರಳಿದ್ದ ಎಣ್ಣೆಕೊಪ್ಪ ಗೊಲ್ಲರ ತಾಂಡಾದ ಬಂಗಾರಪ್ಪ ಅವರ ಮೇಲೆ ಚಿರತೆ ದಾಳಿ ನಡೆಸಿದೆ. ಆದರೆ ಸಾಕು ನಾಯಿಗಳು ಚಿರತೆ ಮೇಲೆ ದಾಳಿ ನಡೆಸಿ ಮಾಲೀಕನನ್ನು ಕಾಪಾಡಿದ್ದು, ಸಾರ್ವಜನಿಕರಿಂದ ಶ್ವಾನಗಳ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಎಂದಿನಂತೆ ಬಂಗಾರಪ್ಪ ಅವರು ಕಟ್ಟಿಗೆ ತರಲು ಕಾಡಿಗೆ ಹೋಗಿದ್ದರು. ಅವರ ಜತೆಗೆ ಸಾಕು ನಾಯಿಗಳೂ ತೆರಳಿದ್ದವು. ಈ ವೇಳೆ ಚಿರತೆ ದಾಳಿ ನಡೆಸಿದ್ದು ಬಂಗಾರಪ್ಪ ಅವರ ಕೈ, ಕಾಲುಗಳಿಗೆ ಗಂಭೀರ ಗಾಯವಾಗಿದೆ. ಬಂಗಾರಪ್ಪ ಅವರ ಮೇಲೆ ದಾಳಿ ಮಾಡುತ್ತಿದ್ದ ಚಿರತೆ ಮೇಲೆ ಸಾಕು ನಾಯಿಗಳು ಪ್ರತಿದಾಳಿ ನಡೆಸಿವೆ. ಚಿರತೆಯನ್ನು ಓಡಿಸಿ ಬಂಗಾರಪ್ಪ ಅವರ ಪ್ರಾಣ ರಕ್ಷಣೆ ಮಾಡಿದ್ದು, ಗಾಯಗೊಂಡಿರುವ ಬಂಗಾರಪ್ಪ ಅವರನ್ನು ಶಿಕಾರಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

No tags