ನ್ಯೂಸ್

ಚನ್ನರಾಯಪಟ್ಟಣದಲ್ಲಿ ಮಳೆ ನೀರಲ್ಲಿ ಬೈಕ್​ ಸಮೇತ ಕೊಚ್ಚಿಹೋದ 5ನೇ ತರಗತಿ ವಿದ್ಯಾರ್ಥಿನಿ... ಅಣ್ಣನ ಕಣ್ಣೆದುರೇ ದುರಂತ ಸಾವು

ಹಾಸನ: ದೊಡ್ಡಪ್ಪನ ಮಗನ ಜತೆ ಶಾಲೆಗೆ ತೆರಳುತ್ತಿದ್ದ 5ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮಳೆ ನೀರಲ್ಲಿ ಬೈಕ್​ ಸಮೇತ ಕೊಚ್ಚಿಹೋಗಿ ದುರಂತ ಅಂತ್ಯ ಕಂಡ ಘಟನೆ ಚನ್ನರಾಯಪಟ್ಟಣ ತಾಲೂಕು ದಡ್ಡಿಹಳ್ಳಿಯಲ್ಲಿ ಗುರುವಾರ ಸಂಭವಿಸಿದೆ.

ಹೆಗ್ಗಡಗೆರೆ ಗ್ರಾಮದ ರಾಜಾಬೋವಿ ಅವರ ಮಗಳು ರಂಜಿತಾ(11) ಮೃತ ದುರ್ದೈವಿ. ದಡ್ಡಿಹಳ್ಳಿಕೆರೆ ಕೋಡಿ ಬಿದ್ದು ರಸ್ತೆಯ ಮೇಲೆ ರಭಸವಾಗಿ ಹರಿಯುತ್ತಿದ್ದ ನೀರಲ್ಲಿ ಸಿಲುಕಿ ದುರಂತ ಅಂತ್ಯ ಕಂಡಿದ್ದಾಳೆ. ತನ್ನ ದೊಡ್ಡಪ್ಪನ ಮಗನ ಜತೆ ಬೈಕ್​ನಲ್ಲಿ ಶಾಲೆಗೆ ತೆರಳುತ್ತಿದ್ದಾಗ, ರಸ್ತೆಯಲ್ಲಿ ಹರಿಯುತ್ತಿದ್ದ ನೀರನ್ನು ದಾಟುತ್ತಿದ್ದಾಗ ಬೈಕ್​ನೊಂದಿಗೆ ಕೊಚ್ಚಿಹೋದಳು. ಅದೃಷ್ಟವಶಾತ್​ ಆಕೆಯ ದೊಡ್ಡಪ್ಪನ ಮಗ ಅಪಾಯದಿಂದ ಪಾರಾಗಿದ್ದಾನೆ. ಮಗಳ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇನ್ನು ಶಾಲೆಯಲ್ಲೂ ರಂಜಿತಾ ಸಾವಿನ ಸುದ್ದಿ ಕೇಳಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗ ಕಂಬನಿ ಮಿಡಿದಿದೆ.