ನ್ಯೂಸ್

ಅತ್ತ ಹಿಜಾಬ್ ವಿವಾದ, ಇತ್ತ ಭಾವೈಕ್ಯತೆ ಸಾರುವ ಕೊಂಡೋತ್ಸವ

ಚಾಮರಾಜನಗರ: ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ನೀಡಿರುವ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿ ಮುಸ್ಲಿಂ ಮುಖಂಡರು‌‌ ಗುರುವಾರ ಬಂದ್ ಗೆ ಕರೆ‌ ನೀಡಿದ್ದಾರೆ. ಇದಕ್ಕೆ‌ ಹಿಂದು ವ್ಯಾಪಾರಿಗಳು ಸೆಡ್ಡು‌‌ ಹೊಡೆದು ಅಂಗಡಿಗಳ ಬಾಗಿಲು ತೆರೆದಿದ್ದಾರೆ. ಉಭಯ ಸಮುದಾಯಗಳ ನಡುವೆ ಕೋಮು ಗಲಭೆ‌ಯಾಗದಂತೆ ಎಚ್ಚರ ವಹಿಸಲು ಜಿಲ್ಲೆಯಲ್ಲಿ ಪೊಲೀಸರ‌ನ್ನ ನಿಯೋಜಿಸಿದ್ದರೆ ಚಾಮರಾಜನಗರ ಸಮೀಪದ ತಮಿಳುನಾಡಿನ ತಾಳವಾಡಿಯಲ್ಲಿ ಗುರುವಾರ ಬೆಳಗ್ಗೆ ನಡೆದ ಕೊಂಡೋತ್ಸವ ಹಿಂದು-ಮುಸ್ಲಿಂ ಭಾವೈಕ್ಯತೆ‌ಗೆ ಸಾಕ್ಷಿಯಾಯಿತು.

ತಾಳವಾಡಿಯಲ್ಲಿ ಮಾರಮ್ಮನ‌ ಜಾತ್ರೆ ವಿಜೃಂಭಣೆಯಿಂದ ನಡೆಯಿತು. ದೇವಸ್ಥಾನದ ಪಕ್ಕದಲ್ಲೇ ಮಸೀದಿ ಇದೆ. ಇದಕ್ಕೆ ಅಂಟಿಕೊಂಡಂತೆ ವೇಣುಗೋಪಾಲಸ್ವಾಮಿ ದೇಗುಲವೂ ಇದೆ.‌ ಜಾತ್ರೆ ಪ್ರಯುಕ್ತ ಮಸೀದಿ ಮುಂದೆಯೇ ಕೊಂಡೋತ್ಸವ ಏರ್ಪಡಿಸಿ ಭಕ್ತರು ಕೊಂಡ‌ ಹಾಯ್ದರು. ಸುತ್ತಮುತ್ತಲ ಗ್ರಾಮಗಳಿಂದ ಅಪಾರ ಸಂಖ್ಯೆಯಲ್ಲಿ‌ ಭಕ್ತರು ಜಾತ್ರೆಗೆ ಬಂದಿದ್ದರು. ಇವರಿಗೆ ಮುಸ್ಲಿಮರು ತಂಪು ಪಾನೀಯ, ಎಳನೀರು ವಿತರಣೆ‌ ಮಾಡಿದರು. ಹಲವು ವರ್ಷಗಳಿಂದ ಈ ಕೊಂಡೋತ್ಸವ ಹಿಂದು- ಮುಸ್ಲಿಂ ಭಾವೈಕ್ಯತೆ ಸಾರುತ್ತಿದೆ. ತಾಳವಾಡಿ‌ ತಮಿಳುನಾಡಿಗೆ ಸೇರಿದ್ದರೂ ಅಪ್ಪಟ ಕನ್ನಡಿಗರ ಊರಾಗಿದೆ.