ಸರಗೂರು: ತಾಲೂಕಿನ ಕೊತ್ತೆಗಾಲ ಗ್ರಾಮದಲ್ಲಿ ಶಾಸಕ ಅನಿಲ್ ಚಿಕ್ಕಮಾದು ಸೋಮವಾರ ನೂತನ ಮಾರಮ್ಮ ದೇವಸ್ಥಾನ ಉದ್ಘಾಟನೆ ಹಾಗೂ ಗುಜ್ಜಮ್ಮ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.
ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಹೋಮ, ಹವನ, ಪೂಜಾ ಕೈಂಕರ್ಯಗಳು ಜರುಗಿದವು. ಪೂಜೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ತಳಿರು- ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಶಾಸಕ ಅನಿಲ್ ಚಿಕ್ಕಮಾದು ಹಾಗೂ ದೇವಾಲಯ ನಿರ್ಮಾಣಕ್ಕೆ ಹಣ ಸಹಾಯ ಮಾಡಿದವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಮಾತನಾಡಿದ ಶಾಸಕ ಅನಿಲ್ ಚಿಕ್ಕಮಾದು, ಕೊತ್ತೇಗಾಲ ಗ್ರಾಮದಿಂದ ಚಿಕ್ಕದೇವಮ್ಮ ಬೆಟ್ಟಕ್ಕೆ ಹೋಗುವ ರಸ್ತೆ ಕಾಮಗಾರಿ ಶೀಘ್ರದಲ್ಲಿ ನೆರವೇರಿಸಲಾಗುತ್ತದೆ. ಗ್ರಾಮದಲ್ಲಿ ಬಯಲು ರಂಗಮಂದಿರ, ಹ್ಯಾಂಡ್ ಪೋಸ್ಟ್‌ನಿಂದ ಸರಗೂರು ವರೆಗೆ ಜೋಡಿ ರಸ್ತೆ ಕಾಮಗಾರಿ ಹಾಗೂ ಗಾಣಿಗ ಸಮಾಜ ಅಭಿವೃದ್ಧಿಗೆ 5 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜುನಾಥ್, ಜಿ.ಪಂ. ಮಾಜಿ ಸದಸ್ಯ ಪಿ.ರವಿ, ಸುಭಾನ್, ಕೊತ್ತೇಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಲುವಪ್ಪ, ಮಹದೇವ್, ರತ್ನಯ್ಯ, ನಂಜಪ್ಪ, ಮಂಜುನಾಥ್, ರಿತಿಶ್, ಆದಿರಾಜಪ್ಪ ಇತರರು ಇದ್ದರು.