ನ್ಯೂಸ್

ಸ್ಪಾ ಹೆಸರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ಪ್ರಕರಣ : ತನಿಖೆ ಚುರುಕುಗೊಳಿಸಿದ ಪೊಲೀಸರು

ಬೆಂಗಳೂರು: ಕೆ.ಆರ್.ಪುರದ ಪೈಲೇಔಟ್‌ನಲ್ಲಿ ನಿರ್ವಾಣ ಸ್ಪಾ ಹೆಸರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.

ಮಾರತಹಳ್ಳಿ ಉಪವಿಭಾಗದ ಎಸಿಪಿ ಪ್ರಿಯದರ್ಶಿನಿ ನೇತೃತ್ವದ ತಂಡ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು, ವೇಶ್ಯಾವಾಟಿಕೆ ಜಾಲಕ್ಕೆ ನೆರವಾಗುತ್ತಿದ್ದ ಮಧ್ಯವರ್ತಿಗಳ ಕುರಿತು ಮಾಹಿತಿ ಕಲೆಹಾಕಲು ಮುಂದಾಗಿದ್ದಾರೆ.

ವಿದೇಶಿ ಮಹಿಳೆಯರು ಮಾತ್ರವಲ್ಲದೆ ಸ್ಥಳೀಯರು ಸಹ ವೇಶ್ಯಾವಾಟಿಕೆ ದಂಧೆಯಲ್ಲಿ ಭಾಗಿಯಾಗಿರುವುದು ಕಂಡು ಬಂದಿದ್ದು, ಹೀಗಾಗಿ ಅವರನ್ನು ಯಾವ ಮಧ್ಯವರ್ತಿಗಳ ಮೂಲಕ ಕರೆತರಲಾಗುತ್ತಿತ್ತು? ಯಾರ ಮೂಲಕ ಗ್ರಾಹಕರನ್ನು ಸೆಳೆಯಲಾಗುತ್ತಿತ್ತು ಎಂದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ತುಟಿಬಿಚ್ಚದ ಆರೋಪಿ:
ಸ್ಪಾನಲ್ಲಿದ್ದ ೨೩ ಜನ ಕೆಲಸಗಾರರನ್ನು ಸಾಕ್ಷಿಗಳಾಗಿ ಪರಿಗಣಿಸಿರುವ ಪೊಲೀಸರು ಈಗಾಗಲೇ ಹಲವು ಮಾಹಿತಿಗಳನ್ನು ಕಲೆಹಾಕಿದ್ದಾರೆ. ಆದರೆ ಮಾಲೀಕ ಹಾಗೂ ಪ್ರಮುಖ ಆರೋಪಿಯಾಗಿರುವ ಅನಿಲ್ ರೆಡ್ಡಿ, ವಿಚಾರಣೆ ವೇಳೆ ಮಧ್ಯವರ್ತಿಗಳ ಕುರಿತು ಯಾವುದೇ ಮಾಹಿತಿಯನ್ನು ಹೊರಹಾಕಿಲ್ಲ ಎಂದು ತಿಳಿದು ಬಂದಿದೆ. ಆದ್ದರಿಂದ ದಾಳಿ ಸಂದರ್ಭದಲ್ಲಿ ರಕ್ಷಿಸಲ್ಪಟ್ಟ ೪೪ ಜನ ಮಹಿಳೆಯರ ವಿಚಾರಣೆಯನ್ನು ಪೊಲೀಸರು ಆರಂಭಿಸಿದ್ದಾರೆ. ಅಲ್ಲದೆ ದಾಳಿ ವೇಳೆ ಸಿಕ್ಕ ೪೭ ಜನ ಗ್ರಾಹಕರಿಗೂ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಲಾಗಿದೆ. ಮತ್ತೊಂದೆಡೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಅನಿಲ್ ರೆಡ್ಡಿ, ರಕ್ಷಿಸಲ್ಪಟ್ಟ ಯುವತಿಯರು ಮತ್ತು ಸ್ಪಾ ಕೆಲಸಗಾರರ ಮೊಬೈಲ್ ಫೋನ್‌ಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?
ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಹಾದೇವಪುರ ಠಾಣಾ ವ್ಯಾಪ್ತಿಯ ನಿರ್ವಾಣ ಸ್ಪಾ ಮೇಲೆ ಜ. ೬ ರ ರಾತ್ರಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಸುಮಾರು ೪ ಗಂಟೆಗಳ ಕಾಲ ಪರಿಶೀಲನೆ ನಡೆಸಿ ವಿದೇಶ, ಹೊರ ರಾಜ್ಯ, ರಾಜ್ಯಗಳ ಒಟ್ಟು ೪೪ ಮಹಿಳೆಯರ ರಕ್ಷಣೆ ಮಾಡಲಾಗಿತ್ತು. ಪ್ರಮುಖ ಆರೋಪಿ ಅನಿಲ್ ರೆಡ್ಡಿ ಸಹಿತ ೩೪ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ಪ್ರಕರಣದಲ್ಲಿ ಎಸಿಬಿ ಅಧಿಕಾರಿಗಳೇ ಶಾಮಿಲು ಆಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಬಳಿಕ ಮಾರತಹಳ್ಳಿ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ಪ್ರಕರಣದ ತನಿಖೆಗೆ ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದರು.