ನ್ಯೂಸ್

ಬಿಎಸ್​ವೈಗೆ ವಿಜಯದಶಮಿ ಹಬ್ಬದ ಶುಭ ಕೋರಿದ ಸಿಎಂ ಬೊಮ್ಮಾಯಿ: ಉಪ ಸಮರದ ಬಗ್ಗೆ ಪ್ರಸ್ತಾಪ

arunakunigal

ಬೆಂಗಳೂರು: ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಪ್ರಚಾರ ದಸರಾ ಹಬ್ಬದ ಬಳಿಕ ಮತ್ತಷ್ಟು ಬಿರುಸಾಗಲಿದೆ. ಅ.17 ರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹಾಗೂ ಅ.20ರಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಚಾರದ ಅಖಾಡಕ್ಕೆ ಧುಮುಕಲಿದ್ದಾರೆ.

ಕಾವೇರಿ ನಿವಾಸದಲ್ಲಿ ಮಾಜಿ ಸಿಎಂ ಬಿಎಸ್​ವೈ ಅವರನ್ನು ಭೇಟಿಯಾದ ಸಿಎಂ ಬಸವರಾಜ ಬೊಮ್ಮಾಯಿ ವಿಜಯದಶಮಿ ಹಬ್ಬದ ಶುಭಾಶಯ ಹೇಳಿದರು. ನಂತರ ಮಾಧ್ಯಮದರೊಂದಿಗೆ ಮಾತನಾಡಿದ ಬೊಮ್ಮಾಯಿ, ಅ.17 ರಿಂದ ಹಾನಗಲ್​ನಲ್ಲಿ ಪ್ರಚಾರ ಮಾಡಲಿದ್ದು, ಸಿಂದಗಿ ಕ್ಷೇತ್ರದಲ್ಲೂ ಎರಡು ದಿನ ಬಿಡಾರ ಹೂಡುವೆ. ಅ.20ರಿಂದ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗುವುದಾಗಿ‌ ಯಡಿಯೂರಪ್ಪ ತಿಳಿಸಿದ್ದಾರೆ ಎಂದರು.

ಅರ್ಥಹೀನ ಚರ್ಚೆ: ಮಾಜಿ ಸಿಎಂ ಬಿಎಸ್​ವೈ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಹಸ್ಯ ಭೇಟಿಯ ಊಹಾಪೋಹಗಳ ಮೇಲೆ ನಡೆದಿರುವ ಚರ್ಚೆಯೇ ಅರ್ಥಹೀನ. ಈಗಾಗಲೇ ಬಿಎಸ್​ವೈ ಸ್ಪಷ್ಟನೆ ನೀಡಿದ್ದು, ಸಿದ್ದರಾಮಯ್ಯ ಬಲವಾಗಿ ಅಲ್ಲಗಳೆದಿದ್ದಾರೆ. ಗೌಪ್ಯ ಭೇಟಿ ಹಾಗೂ ಸಮಾಲೋಚನೆ ಕುರಿತು ನೀಡಿದ‌ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ ಎನ್ನುವುದು ವೇದ್ಯವಾಗಿದೆ ಎಂದು ಬೊಮ್ಮಾಯಿ ಹೇಳಿದರು.

ತಮ್ಮ ಹಾಗೂ ಸಿದ್ದರಾಮಯ್ಯ ನಡುವಿನ ಟ್ವೀಟ್ ವಾರ್​ಗೆ ಸಂಬಂಧಿಸಿದಂತೆ ಬೊಮ್ಮಾಯಿ‌, ರಾಜಕೀಯದಲ್ಲಿ ಇವೆಲ್ಲ ಇದ್ದದ್ದೆ ಎಂದರು. ಮಸಾಲ ಜಯರಾಂ ಅಸಮಾಧಾನ ವ್ಯಕ್ತಪಡಿಸಿ ನೀಡಿದ ಹೇಳಿಕೆ ಬಗ್ಗೆ ಬಹಿರಂಗವಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ಅವರೂ ನಮ್ಮ ಸ್ನೇಹಿತರು ಎಂದು ಚುಟುಕಾಗಿ ಹೇಳಿದರು.