ದಾವಣಗೆರೆ: ಎಮ್ಮೆಗಳು ಪರಸ್ಪರ ಗುದ್ದಾಡಿಕೊಂಡಿದ್ದು, ಆ ವೇಳೆ ಗರ್ಭಿಣಿ ಎಮ್ಮೆಯೊಂದು 80 ಅಡಿ ಆಳದ ಬಾವಿಗೆ ಬಿದ್ದ ಘಟನೆ ಮಂಗಳವಾರ ಬೆಳಗಿನ ಜಾವ ಸಂಭವಿಸಿದೆ.
ಹರಪನಹಳ್ಳಿ ತಾಲೂಕು ಲಕ್ಷ್ಮೀಪುರ ಗ್ರಾಮದಲ್ಲಿ ಎಮ್ಮೆಗಳ ನಡುವೆ ಜಗಳವಾಗಿದೆ. ಆ ವೇಳೆ ಒಂದು ಎಮ್ಮೆಯು ಆಕಸ್ಮಿಕವಾಗಿ ಬಾವಿಯ ಮೇಲ್ಭಾಗಕ್ಕೆ ಜಿಗಿದಿದ್ದು, ಜಾಲರಿಯೂ ಹರಿದು ಎಮ್ಮೆ ಬಾವಿಯೊಳಗೆ ಬಿದ್ದಿದೆ. ಬಾವಿಗೆ ಬಿದ್ದ ಲಕ್ಷ್ಮೀಪುರ ಗ್ರಾಮದ ಕೊಟ್ರೇಶ್ ನಾಯ್ಕ ಎಂಬುವರ ಎಮ್ಮೆಯನ್ನು ಮೇಲಕ್ಕೆತ್ತಲು ಅಗ್ನಿಶಾಮಕ ದಳದ 10 ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಳಗ್ಗೆ 5.30 ರಿಂದ ಸತತ 4 ಗಂಟೆ ಕಾರ್ಯಾಚರಣೆ ನಡೆಸಿದರು. 80 ಅಡಿ ಆಳದ ಬಾವಿಯಲ್ಲಿ 7 ಅಡಿ ನೀರಿತ್ತು. ಸುಭಾನ್ ಮತ್ತು ಆನಂದ್ ಎಂಬ ಸಿಬ್ಬಂದಿ ಬಾವಿಯೊಳಗೆ ಇಳಿದರು.
ಮೊದಲು ಏಣಿಯನ್ನು ಬಳಸಲು ಪ್ರಯತ್ನಿಸಿ ನಂತರ ಹಗ್ಗದ ಸಹಾಯದಿಂದ ಕೆಳಗಿಳಿದರು. ಇತರ ಸಿಬ್ಬಂದಿ ಮೇಲಿನಿಂದ ಎಳೆದುಕೊಂಡು ಎಮ್ಮೆಯನ್ನು ಸುರಕ್ಷಿತವಾಗಿ ಪಾರು ಮಾಡಿದರು ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮ ತಿಳಿಸಿದರು. ಮೂರು ವರ್ಷದ ಆ ಎಮ್ಮೆಯು ಗರ್ಭ ಧರಿಸಿತ್ತು. ಅದು ಸುರಕ್ಷಿತವಾಗಿದೆ ಎಂದು ತಿಳಿದುಬಂದಿದೆ. ಚಿತ್ರ: ಡಿವಿಜಿ ಎಮ್ಮೆ ಜುಲೈ 28 ಹರಪನಹಳ್ಳಿ ತಾಲೂಕು ಲಕ್ಷಿ$್ಮಪುರ ಗ್ರಾಮದಲ್ಲಿ ಮಂಗಳವಾರ ಬಾವಿಗೆ ಬಿದ್ದ ಎಮ್ಮೆಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದರು.