ನ್ಯೂಸ್

2 ತಿಂಗಳ ಹಿಂದೆಯೇ ರಾಜೀನಾಮೆಗೆ ನಿರ್ಧರಿಸಿದ್ದೆ... ಎನ್ನುತ್ತಲೇ ನೂತನ ಸಿಎಂ ಬಗ್ಗೆ ಬಿಎಸ್​ವೈ ಕೊಟ್ಟ ಪ್ರತಿಕ್ರಿಯೆ ಇಲ್ಲಿದೆ

ಬೆಂಗಳೂರು: 2 ತಿಂಗಳ ಹಿಂದೆಯೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲು ನಾನು ತೀರ್ಮಾನಿಸಿದ್ದೆ. ಹೀಗಾಗಿ ಸರ್ಕಾರಕ್ಕೆ 2 ವರ್ಷವಾದ ಬಳಿಕ ನಾನು ರಾಜೀನಾಮೆ ಕೊಟ್ಟಿರುವೆ. ನನ್ನ ಮನವಿ ಸ್ವೀಕರಿಸಿದ ರಾಜ್ಯಪಾಲರಿಗೆ ಧನ್ಯವಾದ. ನನಗೆ ಯಾವುದೇ ಒತ್ತಡ ಇರಲಿಲ್ಲ. ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಎಂದು ಸ್ವಇಚ್ಛೆಯಿಂದ ರಾಜೀನಾಮೆ ಕೊಟ್ಟಿದ್ದೇನೆ ಎಂದು ಬಿ.ಎಸ್​.ಯಡಿಯೂರಪ್ಪ ಹೇಳಿದರು.

ರಾಜೀನಾಮೆ ಪತ್ರ ಸಲ್ಲಿಸಿ ರಾಜಭವನದಿಂದ ಹೊರ ಬರುತ್ತಿದ್ದಂತೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಮುಂದಿನ ಸಿಎಂ ಯಾರು ಎಂದು ನಾನು ಹೇಳೋದಿಲ್ಲ. ಸಿಎಂ ಸ್ಥಾನಕ್ಕೆ ಯಾರ ಹೆಸರನ್ನೂ ನಾನು ಸೂಚಿಸಿಲ್ಲ. ಹೈಕಮಾಂಡ್​ ನಿರ್ಧರಿಸಲಿದೆ. ಯಾರೇ ಸಿಎಂ ಆದರೂ ನಾನು ಅವರಿಗೆ ಸಂಪೂರ್ಣವಾದ ಬೆಂಬಲ ಕೊಡುತ್ತೇನೆ. ಮಠಾಧೀಶರಿಗೆ ಹೃದಯ ಪೂರಕವಾಗಿ ಅಭಿನಂದನೆ ಸಲ್ಲಿಸುವೆ. ಮುಂದೆ ಬರುವ ಮುಖ್ಯಮಂತ್ರಿಗೂ ಶ್ರೀಗಳ ಸಹಕಾರ ಇರಲಿ ಎಂದರು.

ವಲಸಿಗ ಮಂತ್ರಿಗಳು ಮುಂದುವರಿಯುತ್ತಾರೆ. ಅವರೆಲ್ಲರೂ ನಮ್ಮ ಪಕ್ಷದಲ್ಲೇ ಇರುತ್ತಾರೆ. ಅವರೆಲ್ಲರೂ ನಮ್ಮವರೇ. ನಮ್ಮ ಸರ್ಕಾರ ಬರಲು ಯಾರು ಕಾರಣಕರ್ತರೋ ಅವರೆಲ್ಲರಿಗೂ ನೂತನ ಸಿಎಂ ಕೂಡ ಸಹಕಾರ ಕೊಡ್ತಾರೆ ಎಂದು ಯಡಿಯೂರಪ್ಪ ಹೇಳಿದರು.

ರಾಜ್ಯದಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವ ಸಂಕಲ್ಪ ತೊಟ್ಟಿದ್ದೇನೆ. 75 ವರ್ಷ ದಾಟಿದ ನನಗೆ 2 ವರ್ಷ ಸಿಎಂ ಸ್ಥಾನ ಕೊಟ್ಟಿದ್ದಾರೆ. ನನ್ನ ಬಗ್ಗೆ ಹೈಕಮಾಂಡ್​ ವಿಶೇಷ ಕಾಳಜಿ ತೋರಿದೆ. ಈ ಹಿಂದೇನೆ ರಾಜೀನಾಮೆ ನೀಡ್ತೀನಿ ಅಂತ ಹೇಳಿದ್ದೆ. ರಾಜ್ಯದ ಜನತೆ ಇಷ್ಟು ವರ್ಷ ನನ್ನ ಜತೆಗಿದ್ದರು. ಅವರಿಗೆ ನಾನು ಧನ್ಯವಾದ ಸಲ್ಲಿಸಿದ್ದೇನೆ. 7 ಬಾರಿ ಶಾಸಕರಾಗಿ ಆಯ್ಕೆ ಮಾಡಿದ ನನ್ನ ಕ್ಷೇತ್ರದ ಜನತೆಗೆ ಅಭಿನಂದನೆ ಸಲ್ಲಿಸುವೆ ಎಂದರು.