ನ್ಯೂಸ್

ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಣೆ ವೇಳೆ ಬಿಎಸ್​ವೈ ಕಣ್ಣೀರಿಟ್ಟಿದ್ದನ್ನು ಸಹಿಸದೆ ಅಭಿಮಾನಿ ನೇಣಿಗೆ ಶರಣು!

ಚಾಮರಾಜನಗರ: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಕೊಟ್ಟಿದ್ದಕ್ಕೆ ಮನನೊಂದ ಬಿಎಸ್​ವೈ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇಂತಹ ಘಟನೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ನಡೆದಿದೆ. ರವಿ (35) ಮೃತ ದುರ್ದೈವಿ. ರವಿ ಹೋಟೆಲ್​ನಲ್ಲಿ ಕೆಲಸ ಮಾಡಿಕೊಂಡಿದ್ದ. ಯಡಿಯೂರಪ್ಪನವರ ಅಪ್ಪಟ ಅಭಿಮಾನಿಯಾಗಿದ್ದ ರವಿ, ನಿನ್ನೆ ಸಿಎಂ ಸ್ಥಾನಕ್ಕೆ ಬಿಎಸ್​ವೈ ರಾಜೀನಾಮೆ ಕೊಡುತ್ತಿದ್ದಂತೆ ಮಂಕಾಗಿದ್ದ. ರಾಜೀನಾಮೆ ಘೋಷಣೆಯ ವಿಡಿಯೋವನ್ನು ಪದೇಪದೆ ನೋಡಿದ ರವಿ, ಯಡಿಯೂರಪ್ಪ ಅವರು ಕಣ್ಣೀರು ಸುರಿಸಿದ್ದು ಬೇಸರ ತಂದಿದೆ ಎಂದು ಗ್ರಾಮದ‌ ಗುರುಸ್ವಾಮಿ ಬಳಿ ಹೇಳಿಕೊಂಡಿದ್ದ. ರಾತ್ರಿವರೆಗೂ ಇದೇ ಬೇಸರದಲ್ಲಿದ್ದ. ಬೆಳಗ್ಗೆ ಅವನ ಕ್ಯಾಂಟೀನ್ ಬಳಿಗೆ ಬಂದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ಬಿ.ಎಸ್.ಯಡಿಯೂರಪ್ಪ ಮೇಲೆ‌ ರವಿ ಇಟ್ಟಿದ್ದ ಅಭಿಮಾನ‌ ಕಂಡು ಊರಿನ‌ ಜನ ಅವನನ್ನು ರಾಜಾಹುಲಿ ಎಂದೇ ಕರೆಯುತ್ತಿದ್ದರು. 2017ರಲ್ಲಿ ನಡೆದ ಉಪಚುನಾವಣೆಗೆ ಹಾಲಿ ಶಾಸಕ ನಿರಂಜನ್ ಕುಮಾರ್ ಪರ ಬಿ.ಎಸ್.ಯಡಿಯೂರಪ್ಪ ಪ್ರಚಾರ ಮಾಡಲು ಗುಂಡ್ಲುಪೇಟೆಗೆ ಆಗಮಿಸಿದ್ದರು.‌ ಈ ವೇಳೆ ಅವರ ಜತೆಗೆ ರವಿ ಊರುಕೇರಿಗಳನ್ನು ಸುತ್ತಿದ್ದ. ಮಾತು ಮಾತಿಗೂ ಯಡಿಯೂರಪ್ಪ ಜಪ‌ಮಾಡುತ್ತಿದ್ದ. ಸಿಎಂ ಸ್ಥಾನಕ್ಕೆ ರಾಜೀನಾಮೆ ‌ನೀಡಿದಾಗ ಯಡಿಯೂರಪ್ಪ ಸುರಿದ ಕಣ್ಣೀರನ್ನು ಕಂಡು ಮನನೊಂದು‌ ಆತ್ಮಹತ್ಯೆ ‌ಮಾಡಿಕೊಂಡಿದ್ದಾನೆ.