ಯಳಂದೂರು: ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಲ್ಲಿ ಶ್ರೀ ಬಿಳಿಗಿರಂಗನಾಥ ಸ್ವಾಮಿ ಮಹಾರಥೋತ್ಸವ (ದೊಡ್ಡಜಾತ್ರೆ) ಶನಿವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ಬಿಳಿಗಿರಿರಂಗನ ಬೆಟ್ಟದಲ್ಲಿ ಪ್ರತಿವರ್ಷ ದೊಡ್ಡ ಜಾತ್ರೆ ನಡೆಯುತ್ತದೆ. ಆದರೆ ದೇವಸ್ಥಾನ ಜೀಣೋರ್ದ್ಧಾರ ಕಾಮಗಾರಿ ಹಾಗೂ ಕರೊನಾ ಹಿನ್ನೆಲೆಯಲ್ಲಿ 5 ವರ್ಷಗಳಿಂದ ರಥೋತ್ಸವ ನಡೆದಿರಲಿಲ್ಲ. ಹೀಗಾಗಿ, ಈ ಬಾರಿಯ ಜಾತ್ರೆ ಮಹತ್ವ ಪಡೆದುಕೊಂಡಿತ್ತು. ಸ್ಥಳೀಯರು ಮಾತ್ರವಲ್ಲದೆ, ಹೊರ ಜಿಲ್ಲೆಗಳಿಂದಲೂ ಅಪಾರ ಭಕ್ತರು ಭಾಗವಹಿಸಿದ್ದರು. ರಥೋತ್ಸವ ಹಿನ್ನೆಲೆ ಮುಂಜಾನೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿತು. ಮುಂಜಾನೆ 5 ಗಂಟೆಗೆ ಕಲ್ಯಾಣೋತ್ಸವ, ಬೆಳಗ್ಗೆ 7 ಗಂಟೆಗೆ ಪ್ರಸ್ಥಾನ ಮಂಟಪೋತ್ಸವ, ಮಧ್ಯಾಹ್ನ 12.10ರಿಂದ 12.22ರವರೆಗೆ ಸಲ್ಲುವ ಶುಭ ಕರ್ಕಾಟಕ ಲಗ್ನದ ಚಂದ್ರನವಾಂಶ ಶುಭ ಮುಹೂರ್ತದಲ್ಲಿ ಮಹಾರಥೋತ್ಸವ ಜರುಗಿತು.
ಉಚಿತ ಬಸ್ ಸೇವೆ: ಯಳಂದೂರು ಪಟ್ಟಣದಿಂದ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಿರಿದಾಗಿದೆ. ಜಾತ್ರೆಯ ದಿನ ಈ ಭಾಗದಲ್ಲಿ ವಾಹನ ದಟ್ಟಣೆ ಹೆಚ್ಚಾಗುವುದರಿಂದ ಸಂಚಾರಕ್ಕೆ ತೊಡಕಾಗುತ್ತದೆ ಎಂದು ಅಧಿಕಾರಿಗಳು ಸಲಹೆ ನೀಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಚೆಕ್ಪೋಸ್ಟ್ ಬಳಿಯಿಂದ ಬೆಟ್ಟಕ್ಕೆ ಕೆಎಸ್ಆರ್ಟಿಸಿಯಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿತ್ತಾದರೂ ಭಕ್ತರ ಸಂಖ್ಯೆ ಹೆಚ್ಚಿದ್ದರಿಂದ ಬೆಳಗ್ಗೆಯಿಂದಲೇ ಕಿಲೋ ಮೀಟರ್ವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ನೂರಾರು ಭಕ್ತರಿಗೆ ಯಳಂದೂರಿನಲ್ಲೇ ಬಸ್ ಸಿಗದೆ ಪರದಾಡುವಂತಾಯಿತು.
ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಬಿಳಿಗಿರಿರಂಗನಬೆಟ್ಟ 'ದಕ್ಷಿಣದ ತಿರುಪತಿ' ಎಂದೇ ಪ್ರಸಿದ್ಧಿ ಪಡೆದಿದೆ. ಪುರಾತನ ಇತಿಹಾಸ ಹೊಂದಿರುವ ಬೆಟ್ಟದಲ್ಲಿ ನೆಲೆಸಿರುವ ಬಿಳಿಗಿರಿರಂಗನಾಥಸ್ವಾಮಿ ಹಾಗೂ ಅಲಮೇಲಮ್ಮ ದೇವರ ಈ ಪ್ರಾಂತ್ಯದ ಭಕ್ತರ ಆರಾಧ್ಯ ದೈವವಾಗಿದ್ದಾರೆ.