ನ್ಯೂಸ್

ಸಂಪಾದಕೀಯ | ಆರ್ಥಿಕತೆಗೆ ಉತ್ತೇಜನ

ಈ ಸಲದ ಕೇಂದ್ರ ಮುಂಗಡ ಪತ್ರದಲ್ಲಿ ಆದಾಯ ತೆರಿಗೆ ಮಿತಿಯನ್ನು 12 ಲಕ್ಷ ರೂ.ಗಳಿಗೆ ಏರಿಸುವ ಮೂಲಕ ವೇತನದಾರರಿಗೆ ಸರ್ಕಾರ ಖುಷಿನೀಡಿದ ಬೆನ್ನಲ್ಲೇ, ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಜನಸಾಮಾನ್ಯರಿಗೆ ತುಸು ನಿರಾಳತೆ ನೀಡುವ ಕ್ರಮ ಪ್ರಕಟಿಸಿದೆ. ಸಂಜಯ್ ಮಲ್ಹೋತ್ರಾ ಅವರು ಕೇಂದ್ರೀಯ ಬ್ಯಾಂಕಿನ ಗವರ್ನರ್ ಆದ ಬಳಿಕ ತೆಗೆದುಕೊಂಡ ಮೊದಲ ಪ್ರಮುಖ ನೀತಿ ನಿರ್ಧಾರ ಇದಾಗಿದೆ.

ರೆಪೊ ದರದಲ್ಲಿ ಶೇ.0.25 ಮೂಲಾಂಶ ಕಡಿತಗೊಳಿಸುವ ಆರ್​ಬಿಐ ನಿರ್ಣಯವು ಒಟ್ಟಾರೆ ಆರ್ಥಿಕ ಚಟುವಟಿಕೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದೆಂಬುದು ಆರ್ಥಿಕ ತಜ್ಞರ ಲೆಕ್ಕಾಚಾರ. ಚಿಲ್ಲರೆ ಹಣದುಬ್ಬರ ಮಟ್ಟವು ಶೇ. 6ರ ಒಳಗೆ ಇರುವುದು ಆರ್​ಬಿಐ ನಿರ್ಣಯಕ್ಕೆ ಇಂಬು ನೀಡಿದ್ದು, ಈ ನಿರ್ಣಯ ತೆಗೆದುಕೊಳ್ಳಬಹುದು ಎಂಬ ನಿರೀಕ್ಷೆ ಮೊದಲೇ ಇತ್ತು. ಐದು ವರ್ಷಗಳ ನಂತರ ರೆಪೊ ದರ ಇಳಿಕೆಯಾಗಿರುವುದು ಗಮನಾರ್ಹ.

ವಿವಿಧ ದೇಶಗಳಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳು ಹಾಗೂ ಆರ್ಥಿಕತೆಯ ಅನಿಶ್ಚಿತತೆಯ ನಡುವೆಯೂ ಆರ್​ಬಿಐ ತೆಗೆದುಕೊಂಡಿರುವ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಂತೂ ತೆರಿಗೆ ಹೇರಿಕೆ ವಿಚಾರವಾಗಿ ಕೋಲಾಹಲವನ್ನೇ ಉಂಟುಮಾಡಿದ್ದು, ಇದು ಜಾಗತಿಕ ಆರ್ಥಿಕತೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಂತೂ ಇದ್ದೇ ಇದೆ. ಇದೇನೇ ಇದ್ದರೂ, ರೆಪೊ ದರ ತಗ್ಗಿದ್ದರಿಂದಾಗಿ ಗೃಹ ಸಾಲ, ವಾಹನ ಸಾಲ ಮತ್ತು ವೈಯಕ್ತಿಕ ಸಾಲ ಹೊಂದಿದವರಿಗೆ ಬಡ್ಡಿ ಹೊರೆ ಸ್ವಲ್ಪ ತಗ್ಗುತ್ತದೆ. ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುವ ರಿಯಲ್ ಎಸ್ಟೇಟ್ ವಲಯದಲ್ಲಿ ಹೂಡಿಕೆ ಹೆಚ್ಚಳಕ್ಕೆ ಪೂರಕ ವಾತಾವರಣ ಸೃಷ್ಟಿಯಾಗಲಿದೆ.

ತನ್ಮೂಲಕ ಆರ್ಥಿಕ ಚಟುವಟಿಕೆಗಳಿಗೆ ಇಂಬು ದೊರೆಯುತ್ತದೆ. ಉತ್ಪಾದನಾ ವಲಯ ಹಾಗೂ ಸಣ್ಣ -ಅತಿ ಸಣ್ಣ ಕೈಗಾರಿಕಾ ವಲಯಕ್ಕೆ ಬ್ಯಾಂಕುಗಳಿಂದ ಸಾಲ ದೊರೆತು, ಆ ಮೂಲಕ ಸಹ ಆರ್ಥಿಕತೆಗೆ ಪ್ರಯೋಜನವಾಗಲಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಬಂಡವಾಳ ವೆಚ್ಚ, ಮೂಲಸೌಕರ್ಯ ಅಭಿವೃದ್ಧಿ, ಗ್ರಾಹಕ ವೆಚ್ಚವನ್ನು ಉತ್ತೇಜಿಸಲು ಈ ಕ್ರಮ ವೇಗವರ್ಧಕವಾಗಿ ಪರಿಣಮಿಸಲಿದೆ. ಇದೆಲ್ಲ ಒಂದು ಕಡೆಗಾದರೆ, ಬಡ್ಡಿ ದರ ಕಡಿತದ ಲಾಭವನ್ನು ಬ್ಯಾಂಕುಗಳು ತ್ವರಿತವಾಗಿ ಗ್ರಾಹಕರಿಗೆ ವರ್ಗಾಯಿಸುವುದು ಕೂಡ ಅಷ್ಟೇ ಪ್ರಮುಖವಾದುದು.

ವಿತ್ತ ತಜ್ಞರು ಸಹ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆರ್​ಬಿಐ ರೆಪೊ ದರ ಕಡಿಮೆ ಮಾಡಿದರೂ ಬ್ಯಾಂಕುಗಳು ಅದರ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸದ ನಿದರ್ಶನಗಳನ್ನೂ ಹಿಂದೆ ನೋಡಿದ್ದೇವೆ. ಈ ಬಾರಿ ಹಾಗಾಗದು ಎಂದು ಆಶಿಸೋಣ. ಏಕೆಂದರೆ ಆರ್ಥಿಕತೆಯ ಚಕ್ರದಲ್ಲಿ ಸಾಲಗಾರರು ಸಹ ಪ್ರಮುಖ ಪಾತ್ರಧಾರಿಗಳೇ ಆಗಿದ್ದಾರೆ. ಅಗತ್ಯವಿರುವವರಿಗೆ ಸುಲಭ ಸಾಲ ಲಭ್ಯತೆ ಹಾಗೂ ಬಡ್ಡಿ ದರದಲ್ಲಿನ ಇಳಿಕೆಯು ಸಹಜವಾಗಿಯೇ ಮರುಪಾವತಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಆರ್ಥಿಕತೆಯ ಚಲನಶೀಲತೆಗೆ ಕೊಡುಗೆ ನೀಡುತ್ತದೆ.