ನ್ಯೂಸ್

ಬ್ಲೂಟೂತ್ ಬಳಸೋ ಜನರೇ ಎಚ್ಚರ! ​ನಿಮ್ಗೂ ಬರಬಹುದು ಆಪತ್ತು...

arunakunigal

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ಜಗತ್ತು ವೈರ್​ಲೆಸ್​ ಯುಗವಾಗಿ ಪರಿವರ್ತನೆ ಆಗುತ್ತಿದೆ. ಲ್ಯಾಪ್​ಟಾಪ್​, ಮೊಬೈಲ್​, ಸ್ಮಾರ್ಟ್​ ಟಿವಿ, ಸ್ಮಾರ್ಟ್​ ವಾಚ್​, ಟ್ಯಾಬ್​ ಹೀಗೆ ಒಂದರಿಂದ ಮತ್ತೊಂದು ಎಲೆಕ್ಟ್ರಾನಿಕ್​ ಉಪಕರಣಕ್ಕೆ ಕನೆಕ್ಟ್​ಗೆ ವೈಯರ್​ ಬದಲು ಬ್ಲೂಟೂತ್​ ಹೆಚ್ಚಾಗಿ ಬಳಸಲಾಗುತ್ತಿದೆ.

ಈ ಬ್ಲೂಟೂತ್​ ಮೂಲಕ ಸೈಬರ್​ ಕಳ್ಳರು ನಡೆಸುವ ದಾಳಿಗೆ ಬ್ಲೂಜಾಕಿಂಗ್​ ಮತ್ತು ಬ್ಲೂಸ್ನಾರ್ಫಿಂಗ್​ ಎನ್ನುತ್ತಾರೆ. ಅದಕ್ಕಾಗಿ ಸದಾಕಾಲ ಹ್ಯಾಕರ್ಸ್​ ಸಕ್ರಿಯವಾಗಿರುತ್ತಾರೆ. ಸ್ವಲ್ಪ ಯಾಮಾರಿದರೂ ನಮ್ಮ ಮೊಬೈಲ್​ ಅಥವಾ ಲ್ಯಾಪ್​ಟಾಪ್​ನಲ್ಲಿ ಇರುವ ಡೇಟಾ, ಫೋಟೋ, ಇಮೇಲ್​ಗಳು ಕಳವಾಗಿ ಬ್ಯಾಂಕ್​ ಖಾತೆಗೆ ಅಥವಾ ಅನಾಹುತುಗಳು ಸಂಭವಿಸುವ ಸಾಧ್ಯತೆ ಹೆಚ್ಚು. ಇಲ್ಲವೇ ನಮ್ಮ ಹೆಸರಿನಲ್ಲಿ ಬೇರೆಯವರಿಗೆ ಬೇನಾಮಿ ಸಂದೇಶ ಕಳುಹಿಸಿ ಸಂಕಷ್ಟಕ್ಕೆ ಸಿಲುಕಿಸುತ್ತಾರೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕೆಂಬುದು ಸೈಬರ್​ ತಜ್ಞರ ಸಲಹೆ.

ಮೊಬೈಲ್​ನಲ್ಲಿ ಸಂಗೀತ ಕೇಳಲು ಗಂಟುಕಟ್ಟಿರುವ ವೈಯರ್​ಗಳನ್ನು ಬಿಡಿಸಿ ಇಯರ್​ಫೋನ್​ ಮತ್ತು ಹೆಡ್​ಫೋನ್​ಗಳನ್ನು ಮೊಬೈಲ್​ಗೆ ಚುಚ್ಚಿ ಕಿವಿಗೆ ಸಿಕ್ಕಿಸಿಕೊಳ್ಳುವುದು ದೊಡ್ಡ ಸಹಾಸವೇ ಆಗುತ್ತಿತ್ತು. ಅದೇ ರೀತಿ ಲ್ಯಾಪ್​ಟಾಪ್​ ಮತ್ತು ಫೋನ್​ ನಡುವೆ ಫೈಲ್​​ ವರ್ಗಾವಣೆ ಮಾಡಲು ಹಾಗೂ ಕಾರಿನಲ್ಲಿ ಮೊಬೈಲ್​ ಸ್ವೀಕರ್​ ಕನೆಕ್ಟ್​ ಮಾಡಲು ಕೇಬಲ್​ ಅಗತ್ಯವಾಗಿತ್ತು. ತಂತ್ರಜ್ಞಾನ ಬೆಳೆದಂತೆ ಬ್ಲೂಟೂತ್​ ಡಿವೈಸ್​ ಹೆಚ್ಚು ಬಳಕೆಗೆ ಬಂದಿದೆ. ಬ್ಲೂಟೂತ್​ ಸುಲಭ ಮಾರ್ಗವಾಗಿದ್ದು, ಎಚ್ಚರಿಕೆ ವಹಿಸದಿದ್ರೆ ಅಷ್ಟೇ ಅಪಾಯಕಾರಿ.

ಸಾರ್ವಜನಿಕರು ತಮ್ಮ ಮೊಬೈಲ್​, ಲ್ಯಾಪ್​ಟಾಪ್​, ಸ್ಮಾರ್ಟ್​ ವಾಚ್​ನಲ್ಲಿ ಬ್ಲೂಟೂತ್​ ಆನ್​ ಮಾಡಿದ್ದರೆ ಹ್ಯಾಕರ್ಸ್​ಗಳು ಸುಲಭವಾಗಿ ಒಳನುಗ್ಗಿ ನಮ್ಮ ಉಪಕರಣಗಳಲ್ಲಿ ಇರುವ ಡೇಟಾ ಕಳವು ಮಾಡುವ ಸಾಧ್ಯತೆ ಇರುತ್ತೆ. ಇದನ್ನು ಬ್ಲೂಸ್ನಾರ್ಫಿಂಗ್​ ಎನ್ನಲಾಗುತ್ತೆ.

ಫೋನ್​, ಟ್ಯಾಬ್​ ಮತ್ತು ಲ್ಯಾಟ್​ಟಾಪ್​ನಲ್ಲಿ ಇರುವ ಸಂದೇಶ, ಇಮೇಲ್​, ಫೋಟೋ ಮತ್ತು ಗೌಪ್ಯ ಮಾಹಿತಿ ಮಾಡಿ ಅವುಗಳನ್ನು ಬಳಸಿಕೊಂಡು ಬ್ಯಾಂಕ್​ ಖಾತೆಗೆ ಕನ್ನ ಹಾಕುವ ಎಲ್ಲ ಸಾಧ್ಯತೆಗಳಿವೆ. ಇಲ್ಲವೇ ನಮ್ಮ ಖಾಸಗಿ ಫೋಟೋ ಅಥವಾ ಇಮೇಲ್​ಗಳನ್ನು ಅಸ್ತ್ರವಾಗಿ ಮಾಡಿಕೊಂಡು ಹಣ ವಸೂಲಿಗೆ ಬ್ಲ್ಯಾಕ್​ಮೇಲ್​ ಸಹ ಮಾಡುತ್ತಾರೆ. ಇಂತಹ ಕೃತ್ಯಕ್ಕೆ ಬ್ಲೂಸ್ನಾರ್ಫಿಂಗ್​ ಎನ್ನುತ್ತಾರೆ.

ಮತ್ತೊಂದು 'ಬ್ಲೂಜಾಕಿಂಗ್​'. ಆನ್​ ಆಗಿರುವ ಬ್ಲೂಟೂತ್​ ಡಿವೈಸ್​ಗೆ ಹ್ಯಾಕರ್ಸ್​ಗಳು ಕನೆಕ್ಷನ್​ ಮಾಡಿಕೊಂಡು ನಿಮ್ಮ ಫೋನ್​ಗೆ ಅಕ್ಸೆಸ್​ ಪಡೆದು ಸುತ್ತಮುತ್ತಲಿನ ಇತರ ಡಿವೈಸ್​ಗಳಿಗೆ ಅಶ್ಲೀಲ ಅಥವಾ ಬೆದರಿಕೆ ಸಂದೇಶ ಕಳುಹಿಸಬಹುದು. ಇದಕ್ಕೆ ಬ್ಲೂಜಾಕಿಂಗ್​ ಎಂದು ಸೈಬರ್​ ತಜ್ಞರು ಹೇಳುತ್ತಾರೆ. ಇದಲ್ಲದೆ, ಸಾರ್ವಜನಿಕರ ಡಿವೈಸ್​ ಬಳಸಿಕೊಂಡು ಮತ್ತೊಬ್ಬರಿಗೆ ಡೇಟಾ ವರ್ಗಾವಣೆ ಮಾಡುವ ಸಾಧ್ಯತೆಗಳು ಸಹ ಹೆಚ್ಚಾಗಿರುತ್ತದೆ. ಒಂದು ವೇಳೆ ಅನಾಹುತ ಸಂಭವಿಸಿ ಪೊಲೀಸ್​ ಕೇಸ್​ ದಾಖಲಾದರೇ ಸೈಬರ್​ ಕಳ್ಳರು ಯಾರ ಬ್ಲೂಟೂತ್​ ಬಳಸಿಕೊಂಡಿರುತ್ತಾರೋ ಅವರೇ ಆರೋಪಿ ಸ್ಥಾನದಲ್ಲಿ ನಿಲ್ಲಬೇಕಾಗುವ ಸಂಕಷ್ಟ ಎದುರಾಗುತ್ತದೆ. ಅದಕ್ಕಾಗಿ ಬ್ಲೂಟೂತ್​ ಬಳಸುವ ಮೊದಲು ಕೆಲ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದರೆ, ಅಪಾಯ ತಪ್ಪಿದ್ದಲ್ಲ ಎಂದು ಸಿಐಡಿ ಸೈಬರ್​ ಕ್ರೈಂ ವಿಭಾಗದ ಅಧಿಕಾರಿಗಳು ಕಿವಿ ಮಾತು ಹೇಳಿದ್ದಾರೆ.

  • ಬ್ಲೂಟೂತ್​ ಬಳಸುವಾಗ ಈ ಕ್ರಮ ವಹಿಸಿ
  • ಹೊಸ ಆ್ಯಪ್​, ಅಪ್ಲಿಕೇಷನ್​ ಡೌನ್​ಲೋಡ್​ ಅಥವಾ ಅಪ್​ಡೇಡ್​ ವೇಳೆ ಕೇಳುವ ಪರ್ಮಿಷನ್​ ಪಟ್ಟಿಯನ್ನು ಎಚ್ಚರಿಕೆಯಿಂದ ಓಕೆ ಮಾಡಿ. ಇದರಿಂದ ಅನಿರೀಕ್ಷಿತ ಮತ್ತು ಹಠಾತ್​ ದಾಳಿ ತಪ್ಪಲಿದೆ.
  • ಪಾಸ್​ವರ್ಡ್​, ಗೌಪ್ಯ ಮಾಹಿತಿಯನ್ನು ಬ್ಲೂಟೂತ್​ನಲ್ಲಿ ಕಳುಹಿಸಬೇಡಿ. ಅಗತ್ಯವಿದ್ದರೇ ಫೈಲ್​ಗಳನ್ನು ಎನ್​ಕ್ರಿಪ್ಟ್​ ಮಾಡಿದ ನಂತರವಷ್ಟೇ ಕಳುಹಿಸಿ
  • ಬ್ಲೂಟೂತ್​ ದಾಳಿ ಹತ್ತಿರದಿಂದ ಮಾತ್ರವೇ ಸಾಧ್ಯ. ಅದಕ್ಕಾಗಿ ಸುತ್ತಲ ಜಾಗದ ಮತ್ತು ಜನರ ಬಗ್ಗೆ ಎಚ್ಚರಿಕೆ ಇರಲಿ
  • ಮೊಬೈಲ್​, ಟ್ಯಾಬ್​, ಲ್ಯಾಪ್​ಟಾಪ್​ನಲ್ಲಿ ಬ್ಲೂಟೂತ್​ ಬಳಸಿದ ಮೇಲೆ ಆಫ್​ ಮಾಡಿ