ನ್ಯೂಸ್

ಶ್ವಾನಕ್ಕೂ ಅದ್ದೂರಿ ಬರ್ತ್​ ಡೇ, 150 ಜನ್ರಿಗೆ ಬಾಡೂಟ! ಮನೆಯವರನ್ನ ಬಿಟ್ಟು ನಾಯಿಗಾಗಿಯೇ ಪ್ರತ್ಯೇಕ ಮನೆ ಮಾಡಿದ ಶಿವಮೊಗ್ಗ ಯುವಕ...

ಶಿವಮೊಗ್ಗ: ನಗರದ ಎನ್‌ಟಿ ರಸ್ತೆಯಲ್ಲಿ ಇತ್ತೀಚೆಗೆ ಕುಟುಂಬವೊಂದು ಕೋತಿಯೊಂದಕ್ಕೆ ಜನ್ಮದಿನ ಆಚರಿಸಿ ಸಂಭ್ರಮಿಸಿದ್ದರು. ಇದೀಗ ರಾಗಿಗುಡ್ಡದಲ್ಲಿ ಯುವಕನೊಬ್ಬ ನೆಚ್ಚಿನ ಶ್ವಾನಕ್ಕೆ ಅದ್ದೂರಿಯಾಗಿ ಬರ್ತ್​ ಡೇ ಆಚರಿಸಿ, ದ್ದಾನೆ. 150ಕ್ಕೂ ಹೆಚ್ಚು ಮಂದಿಗೆ ಬಾಡೂಟ ಹಾಕಿಸಿದ್ದಾನೆ.

ರಾಗಿಗುಡ್ಡದ ಮಹಮ್ಮದ್ ಅಯಾಜ್ ಅವರು ಸೈಬೀರಿಯನ್ ಹಸ್ಕಿ ತಳಿಯ ಶ್ವಾನವೊಂದನ್ನು ಸಾಕಿದ್ದಾರೆ. ಇದಕ್ಕೆ ಟೈಸನ್ ಎಂದು ನಾಮಕರಣ ಮಾಡಿದ್ದಾರೆ. ತನ್ನ ಪ್ರೀತಿಯ ನಾಯಿಯ ಮೊದಲ ವರ್ಷದ ಜನ್ಮದಿನದ ಪ್ರಯುಕ್ತ ಜ.13ರ ರಾತ್ರಿ ಮನೆ ಮುಂದೆ ಪೆಂಡಾಲ್ ಹಾಕಿಸಿ ಬಂಧುಮಿತ್ರರನ್ನೂ ಆಹ್ವಾನಿಸಿ ಕೇಕ್ ಕತ್ತರಿಸಿದ್ದಾರೆ. ಟೈಸನ್‌ ಆರಾಮಾಗಿ ಮಲಗಲೆಂದು 13 ಸಾವಿರ ರೂ. ಮೌಲ್ಯದ ಹಾಸಿಗೆಯೊಂದನ್ನು ಗಿಫ್ಟ್ ಆಗಿ ನೀಡಿದ್ದಾರೆ. ಮನೆಯಲ್ಲಿ ನಾಯಿ ಸಾಕಲು ವಿರೋಧಿಸಿದ ಕಾರಣ ಮಹಮ್ಮದ್ ಅಯಾಜ್ ರಾಗಿಗುಡ್ಡದಲ್ಲಿ ಮನೆ ಮಾಡಿ ನಾಯಿಯನ್ನು ಸಾಕುತ್ತಿದ್ದಾರೆ. ಶಿವಮೊಗ್ಗ ರೈಲ್ವೆ ನಿಲ್ದಾಣದ ಸಮೀಪದ ಅಮೀರ್ ಅಹಮದ್ ಕಾಲನಿಯಲ್ಲಿ ಅಯಾಜ್ ಅವರ ಅಪ್ಪ, ಅಮ್ಮ, ಅಣ್ಣ, ಅಕ್ಕಂದಿರು ವಾಸವಿದ್ದಾರೆ. ಇನ್ನು ಅಯಾಜ್​ಗೆ ಶ್ವಾನ ಪ್ರೀತಿ ಬೆಳೆದಿದ್ದು ಹೇಗೆ ಗೊತ್ತಾ?

ಮಹಮ್ಮದ್ ಅಯಾಜ್ ಅವರು ಚನ್ನಗಿರಿಯ ಹೋಟೆಲ್​ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆಗ ಭಾರಿ ಮಳೆಯಲ್ಲಿ ನೆನೆದು ನಡುಗುತ್ತಿದ್ದ ನಾಯಿಯೊಂದಕ್ಕೆ ಹೋಟೆಲ್​ ಬಳಿ ಆಶ್ರಯ ನೀಡಿದ್ದರಂತೆ. ಆ ವೇಳೆ ಅಯಾಜ್​ಗೆ ಪ್ರತಿದಿನ 25 ರೂ. ಕೂಲಿ ಸಿಗುತ್ತಿತ್ತಂತೆ. ಆ ಹಣವನ್ನು ನಾಯಿಗೆ ಹಾಲು, ಊಟಕ್ಕೆ ಬಳಸುತ್ತಿದ್ದರಂತೆ. ತದನಂತರ ಆ ನಾಯಿ ಎರಡು ಮರಿಗಳನ್ನು ಹಾಕಿತ್ತು. ಅವುಗಳನ್ನು ಹೋಟೆಲ್​ಗೆ ಬಂದ ಗ್ರಾಹಕರು ಕೊಂಡೊಯ್ದಿದ್ದರು. ನಾಯಿ ಹೋದ ಮೇಲೆ ಅಯಾಜ್​ಗೆ ಏನೋ ಒಂಥರಾ ಕಳವಳ, ಮಿಸ್ಸಿಂಗ್​ ಆಗೋಕೆ ಶುರುವಾಯ್ತಂತೆ. ತಾನೂ ಒಂದು ನಾಯಿ ಮರಿ ಸಾಕಬೇಕು ಎಂದು ನಿರ್ಧರಿಸಿದಾಗ ಮನೆಯಲ್ಲಿ ಇದಕ್ಕೆ ವಿರೋಧ ಬಂತಂತೆ. ಆದರೂ ಶ್ವಾನದ ಮೇಲಿನ ಪ್ರೀತಿ ಅಯಾಜ್​ಗೆ ಹೆಚ್ಚುತ್ತಲೇ ಇದ್ದು, ಅದಕ್ಕಾಗಿಯೇ ಪ್ರತ್ಯೇಕ ಮನೆ ಮಾಡಿ ಸಾಕುತ್ತಿದ್ದಾರೆ.

ಶ್ವಾನಗಳ ಕೇರ್ ಸೆಂಟರ್​ಗೂ ದಾಖಲು: ಚನ್ನಗಿರಿಯಿಂದ ಶಿವಮೊಗ್ಗಕ್ಕೆ ವಾಪಸ್​ ಆದ ಅಯಾಜ್​, ಟೈಲ್ಸ್ ಕೆಲಸದ ಮೇಸ್ತ್ರಿಯಾಗಿದ್ದಾರೆ. ಕೆಲಸಕ್ಕೆ ಹೋಗುವಾಗ ಪ್ರೀತಿಯ ನಾಯಿ ಟೈಸನ್‌ನ್ನು ಬೊಮ್ಮನಕಟ್ಟೆಯಲ್ಲಿರುವ ಕೆನಾಲ್ನಲ್ಲಿ (ಶ್ವಾನಗಳ ಕೇರ್ ಸೆಂಟರ್) ಬಿಟ್ಟು ಹೋಗುತ್ತಾರೆ. ಸಂಜೆ ಬರುವಾಗ ಮನೆಗೆ ಕರೆದುಕೊಂಡು ಬರುತ್ತಾರೆ. ಟೈಸನ್ ಹುಟ್ಟುಹಬ್ಬದ ಹಿನ್ನೆಲೆ ಕೆಲಸಗಾರರಿಗೆ ರಜೆ ಕೊಟ್ಟು 150 ಜನರಿಗೆ ಬಿರಿಯಾನಿ ಊಟ ಹಾಕಿಸಿದ್ದಾರೆ.