ನ್ಯೂಸ್

ಮಾಲ್​ನಲ್ಲಿ ಬೆಂಕಿ; 24 ಫೈರ್ ಇಂಜಿನ್​ ಕಾರ್ಯಾಚರಣೆ, ಅಗ್ನಿಶಾಮಕ ದಳದ ಇಬ್ಬರಿಗೆ ಗಾಯ

ಮುಂಬೈ: ಇಲ್ಲಿನ ನಾಗಪಾದ ಮಾಲ್​ನಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, 24 ಫೈರ್ ಇಂಜಿನ್​ಗಳು, 16 ಜಂಬೋ ಟ್ಯಾಂಕ್​ಗಳು ಹಾಗೂ 250ಕ್ಕೂ ಅಧಿಕ ಅಗ್ನಿಶಾಮಕ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಅಗ್ನಿಶಾಮಕ ಅಧಿಕಾರಿಗಳು ಇದನ್ನು ಲೆವೆಲ್​-5 ಅಗ್ನಿಆಕಸ್ಮಿಕ ಎಂದು ಘೋಷಿಸಿದ್ದಾರೆ.

ಗುರುವಾರ ರಾತ್ರಿ ಒಂಬತ್ತು ಗಂಟೆಗೇ ಬೆಂಕಿ ತಗುಲಿದ್ದು, ಬೆಳಗಾಗುವಷ್ಟರಲ್ಲಿ ಧಗಧಗಿಸುವ ಬೆಂಕಿಯ ಕೆನ್ನಾಲಗೆಗಳು ಕಾಣಿಕೊಂಡಿವೆ. ಬೆಂಕಿಯನ್ನು ಆರಿಸಲು ನಿರಂತರ ಕಾರ್ಯಾಚರಣೆ ನಡೆಯುತ್ತಿದೆ. ಸುರಕ್ಷತೆ ದೃಷ್ಟಿಯಿಂದ ಮಾಲ್​ ಪಕ್ಕದ 55 ಮಹಡಿಯ ಕಟ್ಟಡವನ್ನು ತೆರವುಗೊಳಿಸಲಾಗಿದ್ದು, ನಿವಾಸಿಗರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ.

ಮುಂಬೈ ಮೇಯರ್​ ಕಿಶೋರಿ ಪೆಡ್ನೇಕರ್​, ಶಾಸಕ ಅಮಿನ್ ಪಟೇಲ್​ ಸ್ಥಳಕ್ಕೆ ಭೇಟಿ ನೀಡಿದ್ದು, ಪಾಲಿಕೆ, ಪೊಲೀಸ್ ಹಾಗೂ ಅಗ್ನಿಶಾಮಕ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗವಾಗಬೇಕಿದೆ. (ಏಜೆನ್ಸೀಸ್​)