ನ್ಯೂಸ್

ಲೈಂಗಿಕ ದೌರ್ಜನ್ಯ, ಮಹಿಳೆಗೆ 118 ಹೊಲಿಗೆ

ಭೋಪಾಲ್​: ಕುಡಿಯುವ ನೀರಿನ ಬಾಟಲಿ ಖರೀದಿಸಲು ಪತಿಯೊಂದಿಗೆ ಹೋಟೆಲ್​ಗೆ ಹೋದ ಮಹಿಳೆಗೆ ದುಷ್ಕರ್ಮಿಗಳು ಅಶ್ಲೀಲವಾಗಿ ಕಮೆಂಟ್​ ಮಾಡಿ ಶಿಳ್ಳೆ ಹೊಡೆದಿದ್ದರು. ಇದನ್ನು ವಿರೋಧಿಸಿದ ಮಹಿಳೆ ದುಷ್ಕರ್ಮಿಗಳ ಪೈಕಿ ಓರ್ವನ ಕಪಾಳಕ್ಕೆ ಮೂರ್ನಾಲ್ಕು ಏಟು ಕೊಟ್ಟಿದ್ದಳು... ಇಷ್ಟಾದರೂ ಸುಮ್ಮನಾಗದ ಕಾಮುಕರು, ಆಕೆಯ ಮುಖಕ್ಕೆ ಬ್ಲೇಡ್​ನಿಂದ ಮನಸೋಇಚ್ಛೆ ಹಲ್ಲೆ ಮಾಡಿ ವಿಕೃತಿ ಮೆರೆದಿದ್ದಾರೆ.

ಇಂತಹ ಅಮಾನುಷ ಕೃತ್ಯ ಮಧ್ಯಪ್ರದೇಶದ ಭೋಪಾಲ್​ನ ಟಿಟಿ ನಗರ ಪ್ರದೇಶದಲ್ಲಿ ಸಂಭವಿಸಿದೆ. ಅಂದು ನೀರಿನ ಬಾಟಲಿ​ ಖರೀದಿಸಲು ಪತಿಯೊಂದಿಗೆ ಹೋಟೆಲ್​ಗೆ ಮಹಿಳೆ ತೆರಳಿದ್ದರು. ಆಕೆಯ ಪತಿ ಹೋಟೆಲ್​ನಲ್ಲಿದ್ದಾಗ ಆರೋಪಿಗಳು ಅಶ್ಲೀಲವಾಗಿ ಕಾಮೆಂಟ್​ ಮಾಡಿ ಶಿಳ್ಳೆ ಹೊಡೆದಿದ್ದರು. ಇದನ್ನು ವಿರೋಧಿಸಿದ ಮಹಿಳೆ ಒಬ್ಬನಿಗೆ ಕಪಾಳ ಮೋಕ್ಷ ಮಾಡಿದ್ದರು. ಘಟನೆ ವಿಕೋಪಕ್ಕೆ ಹೋಗುತ್ತಿದ್ದಂತೆ ಸ್ಥಳೀಯರು ಮಧ್ಯಪ್ರವೇಶಿಸಿ ಎರಡೂ ಕಡೆ ಸಮಾಧಾನ ಮಾಡಿ ಕಳುಹಿಸಿದ್ದರು.

ನಂತರ ಮಹಿಳೆ ಹೋಟೆಲ್​ ಒಳಗೆ ಹೋಗಿ ಪತಿಯೊಂದಿಗೆ ಹೊರಬಂದಾಗ ಆರೋಪಿಗಳು ಬ್ಲೇಡ್​ನಿಂದ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮುಖಕ್ಕೆ 118 ಹೊಲಿಗೆಗಳನ್ನು ಹಾಕಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಹೋಟೆಲ್​ನ ಸಿಸಿ ಕ್ಯಾಮರಾದ ದೃಶ್ಯಾವಳಿ ಪರಿಶೀಲಿಸಿ ಇಬ್ಬರನ್ನು ಬಂಧಿಸಿದ್ದಾರೆ. ಉಳಿದವರ ಪತ್ತೆಗೆ ಬಲೆ ಬೀಸಿದ್ದಾರೆ.