ಮದ್ದೂರು: ನಾವು ಮಾಡುವ ಕೆಲಸವನ್ನು ಪ್ರೀತಿಯಿಂದ ಮಾಡಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡುವುದರ ಜತೆಗೆ ಸುಸಂಸ್ಕೃತ ಸಮಾಜವನ್ನು ನಿರ್ಮಿಸಲು ಸಾಧ್ಯವಾಗುತ್ತದೆಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್.ಮಂಜುನಾಥ್ ಅಭಿಪ್ರಾಯಪಟ್ಟರು.
ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಅಸೋಸಿಯೇಷನ್ಸ್ ಆಫ್ ಅಲಯನ್ಸ್ ಕ್ಲಬ್ ಆಯೋಜಿಸಿದ್ದ ಮಿತೃತ್ವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳಿಗೆ ಉತ್ತಮ ಶೈಲಿಯ ಚಟುವಟಿಕೆಯನ್ನು ಬಾಲ್ಯದಿಂದಲೇ ಕಲಿಸುವುದರ ಮೂಲಕ ಹಲವು ರೋಗಗಳಿಂದ ದೂರವಿರುವಂತೆ ಮಾಡಬಹುದು. ಪ್ರಸ್ತುತ ದಿನಗಳಲ್ಲಿ ಬದಲಾದ ಜೀವನಶೈಲಿ, ಆಹಾರಪದ್ಧತಿ ಮತ್ತು ಒತ್ತಡದ ಬದುಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಾವು ವಿವಿಧ ರೋಗ ರುಜಿನಗಳಿಗೆ ಒಳಗಾಗುತ್ತಿದ್ದೇವೆಂದು ಹೇಳಿದರು.
ವೃದ್ಧರಿಗಿಂತ ಯುವಜನತೆಯೇ ಹೃದಯಸಂಬಂಧಿ ಹಾಗೂ ಇನ್ನಿತರ ವ್ಯಾದಿಗಳಿಗೆ ಒಳಗಾಗುತ್ತಿದ್ದು ಶಿಸ್ತುಬದ್ಧ ಜೀವನ, ಆಹಾರ ಕ್ರಮಗಳ ವ್ಯತ್ಯಯ ಇನ್ನಿತರ ಬದ್ಧತೆಯಿಲ್ಲದ ಹಿನ್ನೆಲೆಯಲ್ಲಿ ಪ್ರತಿ ಮನೆಯಲ್ಲೂ ರೋಗವಿಲ್ಲದ ವ್ಯಕ್ತಿ ಇಲ್ಲವೆಂಬ ಸ್ಥಿತಿ ನಿರ್ಮಾಣವಾಗಿರುವುದಾಗಿ ಬೇಸರ ವ್ಯಕ್ತಪಡಿಸಿದರು.
ಪ್ರತಿ ದಿನವೂ ನಗುತ್ತಿರಬೇಕು, ಮಿತೃತ್ವವನ್ನು ಮೈಗೂಡಿಸಿಕೊಂಡು ಶತೃತ್ವವನ್ನು ಕೊನೆಗಾಣಿಸಬೇಕೆಂದು ಉತ್ತಮ ಮಾತುಗಳನ್ನಾಡುವ ಮೂಲಕ ನಮ್ಮನ್ನು ನೋಡಿ ಕಲಿಯುವ ಮಕ್ಕಳು ಸಮಾಜದ ಅಭ್ಯುದ್ಯಯಕ್ಕಾಗಿ ನಿರಂತರವಾಗಿ ಶ್ರಮಿಸಲಿದ್ದಾರೆಂದು ಹೇಳಿದರು.
ಮನಸ್ಸನ್ನು ದೃಢವಾಗಿಟ್ಟುಕೊಂಡು ಹೃದಯ ನನಗಾಗಿ ಒಂದು ತಾಸು ಚಲಿಸು ನಾನು ನಿನಗಾಗಿ ನಿರಂತರವಾಗಿ ದುಡಿಯುತ್ತೇನೆಂಬ ವೇದವಾಕ್ಯದೊಡನೆ ಮಿತ ಆಹಾರ, ಲಘು ವ್ಯಾಯಾಮ ಅಳವಡಿಕೆ, ಉಪವಾಸ, ನಿದ್ರೆ, ವಿಶ್ರಾಂತಿ, ಸ್ನೇಹಬಳಗ, ತರಕಾರಿ, ಹಣ್ಣು ಸೇವನೆ, ಬೇರೆಯವರೊಂದಿಗೆ ಮನಬಿಚ್ಚಿ ಮಾತನಾಡುವುದು ಹಾಗೂ ಕುಟುಂಬದವರೊಂದಿಗೆ ಬೆರೆಯುವುದರ ಜತೆಗೆ ಹನ್ನೊಂದು ಅಂಶಗಳನ್ನು ಜೀವನಪೂರ್ತಿ ಅಳವಡಿಸಿಕೊಂಡಲ್ಲಿ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದು ಎಂದು ಕಿವಿಮಾತು ಹೇಳಿದರು.
ಅಭಿನಂದನೆ: ಸಂಸ್ಥೆಯ ಅಂತಾರಾಷ್ಟ್ರೀಯ ಅಧ್ಯಕ್ಷ ರಾಜಕುಮಾರ ಸಕ್ಸೇನ ಅವರನ್ನು ಗೌರವಿಸಿ ಸಂಸ್ಥೆಯ ಧ್ಯೇಯೋದ್ದೇಶಗಳು ಮತ್ತು ಸೇವಾ ಕಾರ್ಯಕ್ರಮಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಸಂಗೀತ ನಿರ್ದೇಶಕ ಮತ್ತು ಗೀತ ರಚನೆಕಾರ ವಿ.ಮನೋಹರ್, ಅಂತಾರಾಷ್ಟ್ರೀಯ ನಿರ್ದೇಶಕ ಡಾ.ನಾಗರಾಜು, ದಿವಾಕರ್, ಅಂಜತಾ ರಂಗಸ್ವಾಮಿ, ಕೆ.ಎಂ.ಮುನಿಯಪ್ಪ, ಜಿಲ್ಲಾ ಪ್ರಾಂತಪಾಲ ಎಚ್.ಮಾದೇಗೌಡ ಮತ್ತು ಇತರ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.