ಅನಂತ್ ಅಂಬಾನಿ ಬೆಸ್ಟ್ ಫ್ರೆಂಡ್ ಎಂದ ಅಟ್ಲೀ 
ನ್ಯೂಸ್

‘ಕಷ್ಟದಲ್ಲಿದ್ದಾಗ ಕೈ ಹಿಡಿದ ಬೆಸ್ಟ್ ಫ್ರೆಂಡ್’; ಅನಂತ್ ಅಂಬಾನಿ ಬಗ್ಗೆ ಅಟ್ಲೀ ಭಾವುಕ ಮಾತು | Atlee on Anant Ambani

ನಿರ್ದೇಶಕ ಅಟ್ಲೀ ತಮ್ಮ ಲುಕ್ ಬಗ್ಗೆ ಬಂದ ಟ್ರೋಲ್‌ಗಳು ಹಾಗೂ ಅನಂತ್ ಅಂಬಾನಿ ಮದುವೆಯಲ್ಲಿ ಪತ್ನಿ ಪ್ರಿಯಾ ಧರಿಸಿದ್ದ ‘ಅನಂತ್ಸ್ ಬ್ರಿಗೇಡ್’ ಚೋಲಿ ಬಗ್ಗೆ ಬಂದ ಟೀಕೆಗಳಿಗೆ ಖಡಕ್ ಉತ್ತರ ನೀಡಿದ್ದಾರೆ.

Atlee Anant Ambani: ನಿರ್ದೇಶಕ ಅಟ್ಲೀ ಇದೀಗ ತಾವು ನಿರ್ಮಿಸಿರುವ ತಮಿಳು ಚಿತ್ರದ ಸಕ್ಸಸ್ ಖುಷಿಯಲ್ಲಿದ್ದಾರೆ. ಈ ವೇಳೆ ತಮ್ಮ ವೈಯಕ್ತಿಕ ಜೀವನ, ಸಿನಿಮಾ ಜರ್ನಿ ಹಾಗೂ ತಮ್ಮ ಬಗ್ಗೆ ಬಂದ ಟ್ರೋಲ್‌ಗಳ ಬಗ್ಗೆಯೂ ಅವರು ಮನಬಿಚ್ಚಿ ಮಾತನಾಡಿದ್ದಾರೆ. ಅದರಲ್ಲೂ ತಮ್ಮ ಲುಕ್ ಬಗ್ಗೆ ಬಂದ ಟೀಕೆಗಳು ಮತ್ತು ಅನಂತ್ ಅಂಬಾನಿ ಮದುವೆಯಲ್ಲಿ ಪತ್ನಿ ಪ್ರಿಯಾ ಧರಿಸಿದ್ದ ‘ಅನಂತ್ಸ್ ಬ್ರಿಗೇಡ್’ ಚೋಲಿ ಬಗ್ಗೆ ಬಂದ ಟೀಕೆಗಳಿಗೆ ಅಟ್ಲೀ ಖಡಕ್ ಆಗಿಯೇ ಉತ್ತರಿಸಿದ್ದಾರೆ.

ಚಿತ್ರದ ಸಕ್ಸಸ್ ಮೀಟ್‌ನಲ್ಲಿ ಅಟ್ಲೀ ಅವರನ್ನು ಅವರ ಲುಕ್ ಬಗ್ಗೆ ಬರುತ್ತಿರುವ ಟ್ರೋಲ್‌ಗಳ ಬಗ್ಗೆ ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ಅವರು, ‘ಅವರು ಏನು ಬೇಕಾದರೂ ಹೇಳಲಿ. ಹೌದು, ನನ್ನ ಮೈಬಣ್ಣ ಕಪ್ಪು. ಅವರು ನನ್ನನ್ನು ‘ಮಾಮೂಲಿ’ ಎಂದು ಕರೆಯುತ್ತಾರೆ. ಅದು ಅವರ ಅಭಿಪ್ರಾಯ’ ಎಂದಿದ್ದಾರೆ. ಸಿನಿಮಾಗಳಲ್ಲಿ ನಾಯಕನಾಗಿ ನಟಿಸಲು ನಾಲ್ಕು ಬಾರಿ ಅವಕಾಶ ಬಂದಿತ್ತು. ಆದರೆ ಆ ಅವಕಾಶಗಳನ್ನು ತಾವು ನಿರಾಕರಿಸಿದ್ದಾಗಿ ಅಟ್ಲೀ ಹೇಳಿದ್ದಾರೆ.

ಅನಂತ್ ನನ್ನ ಕಷ್ಟದ ಸಮಯದಲ್ಲಿ ಕೈ ಹಿಡಿದಿದ್ದರು

2024ರಲ್ಲಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಪ್ರಿಯಾ ಅಟ್ಲೀ ‘ಅನಂತ್ಸ್ ಬ್ರಿಗೇಡ್’ ಎಂದು ಬರೆದ ಚೋಲಿ ಧರಿಸಿದ್ದರು. ಈ ಬಗ್ಗೆ ಬಂದ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅಟ್ಲೀ, “ಅನಂತ್ ನನ್ನ ಆಪ್ತ ಸ್ನೇಹಿತ. ಮುಂಬೈನಲ್ಲಿ ನಾನು ಕಷ್ಟದಲ್ಲಿದ್ದಾಗ ಅವರು ನನ್ನ ಬೆಂಬಲಕ್ಕೆ ನಿಂತಿದ್ದರು. ಹಾಗಾಗಿ ಜನರು ಏನೇ ಹೇಳಲಿ, ನನ್ನ ಸಿನಿಮಾಗಳೇ ನನ್ನ ಉತ್ತರ” ಎಂದಿದ್ದಾರೆ. ಅನಂತ್-ರಾಧಿಕಾ ಮದುವೆಯಲ್ಲಿ ಅನನ್ಯಾ ಪಾಂಡೆ, ಖುಷಿ ಕಪೂರ್ ಹಾಗೂ ಶನಾಯಾ ಕಪೂರ್ ಕೂಡ ಇದೇ ರೀತಿಯ ಚೋಲಿಗಳನ್ನು ಧರಿಸಿದ್ದರು.

ಆಸ್ಕರ್ ವೇದಿಕೆಯಲ್ಲಿ ತಮಿಳು ಮಾತಾಡಬೇಕು

ತಮ್ಮ ಕನಸಿನ ಬಗ್ಗೆ ಮಾತನಾಡಿದ ಅಟ್ಲೀ, ‘ಶಾಲೆಯಲ್ಲಿದ್ದಾಗ ಶಾರುಖ್ ಖಾನ್ ಹಾಗೂ ವಿಜಯ್ ಅಣ್ಣ ಜತೆ ಸಿನಿಮಾ ಮಾಡುತ್ತೇನೆ ಎಂದರೆ ಜನರು ನನ್ನನ್ನು ನೋಡಿ ನಗುತ್ತಿದ್ದರು. ಆದರೆ, ನಾನು ಅದನ್ನು ಮಾಡಿ ತೋರಿಸಿದೆ’ ಎಂದಿದ್ದಾರೆ. ತಮ್ಮ ‘ಬತ್ತಾ’ ಚಿತ್ರವನ್ನು ಆಸ್ಕರ್‌ಗೆ ಕೊಂಡೊಯ್ದು, ಅಲ್ಲಿನ ವೇದಿಕೆಯಲ್ಲಿ ತಮಿಳಿನಲ್ಲಿ ಮಾತನಾಡಬೇಕು ಎಂಬ ಆಸೆ ಇದೆ ಎಂದು ಅಟ್ಲೀ ಹೇಳಿದ್ದಾರೆ. ತಮ್ಮ ‘ರಾಕಾ’ ಚಿತ್ರದ ಬಗ್ಗೆ ತಮಿಳು ಜನರಿಗೆ ಹೆಮ್ಮೆ ಮೂಡಲಿದೆ. ಚಿತ್ರದಲ್ಲಿ ಕೆಲಸ ಮಾಡಿರುವ ಹಾಲಿವುಡ್‌ನವರೂ ಸಿನಿಮಾ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ.

‘ಜವಾನ್’ ಮೂಲಕ ಬಾಲಿವುಡ್‌ಗೆ ಎಂಟ್ರಿ

ಅಟ್ಲೀ 2023ರಲ್ಲಿ ಶಾರುಖ್ ಖಾನ್ ಅಭಿನಯದ ‘ಜವಾನ್’ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ದೀಪಿಕಾ ಪಡುಕೋಣೆ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸಕ್ಸಸ್ ಕಂಡಿತ್ತು. ವಿಶ್ವಾದ್ಯಂತ 1,000 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದ್ದ ‘ಜವಾನ್’, ಅಟ್ಲೀಗೆ ಬಾಲಿವುಡ್‌ನಲ್ಲಿ ದೊಡ್ಡ ಬ್ರೇಕ್ ನೀಡಿತ್ತು. (ಏಜೆನ್ಸೀಸ್)