ಶಿವಮೊಗ್ಗ: ಹಿರಿಯರ ಅನುಭವ, ಅವರು ನಮಗೆ ಕಲಿಸಿದ ವಿದ್ಯೆ ಹಾಗೂ ಬೆಳೆಸಿದ ರೀತಿ ನಮ್ಮ ಜೀವನಕ್ಕೆ ದಾರಿದೀಪ ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು ಹೇಳಿದರು.
ಜಿಲ್ಲಾಡಳಿತದಿಂದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಇದು ಹಿರಿಯರು ಅತ್ಯಂತ ಸಂತಸದಿಂದ ಇರಬೇಕಾದ ದಿನ ಎಂದರು.
ಮಕ್ಕಳನ್ನು ಪೋಷಿಸಿ, ವಿದ್ಯೆ ನೀಡಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿಸಿ ಪರಿಪೂರ್ಣ ಜೀವನವನ್ನು ಹಿರಿಯರು ನಡೆಸಿದ್ದಾರೆ. ಹಿರಿಯರು ನಮಗೆ ತೋರಿಸಿದ ದಾರಿಯಲ್ಲಿ ಇಂದು ನಾವು ಬದುಕನ್ನು ಸಾಗಿಸುತ್ತಿದ್ದು ಅವರನ್ನು ಎಂದಿಗೂ ಮರೆಯಬಾರದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿರಿಯ ನಾಗರಿಕರ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ಕುಟುಂಬವೂ ತಮ್ಮ ಹಿರಿಯರೊಂದಿಗೆ ಈ ದಿನವನ್ನು ಆಚರಿಸಬೇಕು. ಆದರೆ ಇಂದಿನ ಮಕ್ಕಳು ಪಾಲಕರಿಗೂ ಸಮಯ ನೀಡಲು ಸಾಧ್ಯವಾಗದಷ್ಟು ತಮ್ಮ ಕೆಲಸಗಳಲ್ಲಿ ನಿರತರಾಗಿರುವುದು ಬೇಸರದ ಸಂಗತಿ ಎಂದು ಹೇಳಿದರು.
ಹಿರಿಯ ನಾಗರಿಕರಿಗೆ ಸರ್ಕಾರ ಅನೇಕ ಯೋಜನೆ ಜಾರಿಗೆ ತಂದಿದೆ. ಸಂಕಷ್ಟದಲ್ಲಿರುವ ಹಿರಿಯರು ದೂರವಾಣಿ ಕರೆ ಮೂಲಕ ಅಥವಾ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮೂಲಕ ಸೌಲಭ್ಯ ಪಡೆದುಕೊಳ್ಳಬಹುದು ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್, ಜಿಲ್ಲಾ ಅಂಗವಿಕಲ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಶಶಿರೇಖಾ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೃಷ್ಣಪ್ಪ, ಅಲಿಂಕೊ ಸಂಸ್ಥೆ ವ್ಯವಸ್ಥಾಪಕ ಶಿವಕುಮಾರ ಮತ್ತಿತರರಿದ್ದರು.