ನ್ಯೂಸ್

ಬಾಂಗ್ಲಾ ಮೂಲದ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ

ಬೆಂಗಳೂರು: ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಬಾಂಗ್ಲಾ ಮೂಲದ ಮಹಿಳೆಯನ್ನು ದುಷ್ಕರ್ಮಿಗಳು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ.

ಕೊತ್ತನೂರಿನ ಕೃಷ್ಣಪ್ಪ ಲೇಔಟ್ ನಿವಾಸಿ ನಜ್ಮಾ(೨೮) ಕೊಲೆಯಾದವರು. ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ಕಲ್ಕೆರೆ ಕೆರೆ ದಡದ ನಿರ್ಜನಪ್ರದೇಶದಲ್ಲಿ ಈ ಕೃತ್ಯ ನಡೆದಿದೆ. ಶುಕ್ರವಾರ ಬೆಳಗ್ಗೆ ದಾರಿಹೋಕರು ಅಪರಿಚಿತ ಮೃತದೇಹವನ್ನು ಕಂಡು, ಪೊಲೀಸ್ ಸಹಾಯವಾಣಿಯಾದ ೧೧೨ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಹೊಯ್ಸಳ ಗಸ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ಮಹಿಳೆ ಹತ್ಯೆ ಮಾಡಿರುವುದು ಕಂಡು ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿರ್ಜನಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ:

ಬಾಂಗ್ಲಾದೇಶ ಮೂಲದ ಸುಮನ್ ಮತ್ತು ನಜ್ಮಾ ದಂಪತಿ ಮೂವರು ಮಕ್ಕಳೊಂದಿಗೆ ಕಳೆದ ಆರು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾರೆ. ಸುಮನ್ ಬಿಬಿಎಂಪಿ ಕಸದ ಯಾರ್ಡ್‌ನಲ್ಲಿ ಕಸ ಬೇರ್ಪಡಿಸುವ ಕೆಲಸ ಮಾಡುತ್ತಾನೆ. ನಜ್ಮಾ ಕಲ್ಕೆರೆಯ ಡಿಎಸ್‌ಆರ್ ಅಪಾರ್ಟ್‌ಮೆಂಟ್‌ನಲ್ಲಿ ಮನೆಗೆಲಸ ಮಾಡುತ್ತಿದ್ದರು. ಎಂದಿನಂತೆ ಗುರುವಾರವೂ ಅಪಾರ್ಟ್‌ಮೆಂಟ್‌ನಲ್ಲಿ ಮನೆಗೆಲಸಕ್ಕೆ ಬಂದಿದ್ದ ನಜ್ಮಾ ಸಂಜೆವರೆಗೂ ಕೆಲಸ ಮಾಡಿದ್ದಾರೆ. ಬಳಿಕ ಮನೆಗೆ ಹೋಗುವುದಾಗಿ ಅಪಾರ್ಟ್‌ಮೆಂಟ್‌ನಿಂದ ಹೊರಗೆ ಬಂದಿದ್ದಾರೆ. ಬಳಿಕ ಕಲ್ಕೆರೆ ಕೆರೆ ಬಳಿ ನಡೆದು ಹೋಗುವಾಗ ದುಷ್ಕರ್ಮಿಗಳು ನಜ್ಮಾ ಅವರನ್ನು ನಿರ್ಜನಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ಮಾಡಿ ಬಳಿಕ ಉಸಿರುಗಟ್ಟಿಸಿ ಹಾಗೂ ಕಲ್ಲಿನಿಂದ ಮುಖಕ್ಕೆ ಹಲ್ಲೆ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.