ನ್ಯೂಸ್

ಕೆಲಕಾಲ ಆತಂಕ ಸೃಷ್ಟಿಸಿದ ಬ್ಯಾಗ್

ಮಂಜುನಾಥ.ಕೆ

ಬೆಂಗಳೂರು: ರಾಮಮೂರ್ತಿ ನಗರ ್ಲೈ ಓವರ್ ಬಳಿಯ ರಸ್ತೆ ಬದಿ ಅನುಮಾನಾಸ್ಪದವಾಗಿ ಕಂಡು ಬಂದ ಬ್ಯಾಗ್‌ನಿಂದ ಕೆಲ ಕಾಲ ಆತಂಕ ಸೃಷ್ಟಿ ಆಗಿತ್ತು.
ಗುರುವಾರ ಬೆಳಗ್ಗೆ ೮ ಗಂಟೆ ಸುಮಾರಿಗೆ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ಲೈಓವರ್ ಬಳಿ ನೀಲಿ ಬಣ್ಣದ ಬ್ಯಾಗ್ ಇರುವುದು ಕಂಡು ಸಾರ್ವಜನಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ಮಹಿಳೆಯ ಬಟ್ಟೆಗಳು ಮತ್ತು ನೀರಿನ ಬಾಟಲ್ ಇರುವುದು ಕಂಡು ಪೊಲೀಸರು ನಿಟ್ಟುಸಿರು ಬಿಟ್ಟರು. ಬಹುಶಃ ಯಾರೋ ಮಹಿಳೆ ರಸ್ತೆ ಬದಿ ಬ್ಯಾಗ್ ಇಟ್ಟು ಸಮೀಪದಲ್ಲಿನ ಸಾರ್ವಜನಿಕ ಶೌಚಗೃಹಕ್ಕೆ ಹೋಗಿರಬಹುದೆಂದು ತಿಳಿದು ಪೊಲೀಸರು ನಿರಾಳರಾದರು. ಇಚ್ತೀಚಿನ ದಿನಗಳಲ್ಲಿ ಬಾಂಬ್ ಬೆದರಿಕೆ ಸಂದೇಶಗಳು ಬರುತ್ತಿರುವುದರಿಂದ ಯಾವುದೇ ಜಾಗದಲ್ಲಿ ಏನಾದರೂ ಅನುಮಾನಾಸ್ಪದ ವಸ್ತುಗಳು ಕಂಡು ಬಂದರೆ ಸಾರ್ವಜನಿಕರು ಗಾಬರಿಪಡುವಂತಾಗಿದೆ.