|ಹರೀಶ ಬೇಲೂರು
ಬೆಂಗಳೂರು: ದೇಶದಲ್ಲಿ ಕಾಡುತ್ತಿರುವ ನಿರುದ್ಯೋಗ ಸಮಸ್ಯೆ ನಡುವೆಯೂ ಆಗೊಮ್ಮೆ ಈಗೊಮ್ಮೆ ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳಲು ಅರ್ಜಿ ಹಾಕಿ ಪರೀಕ್ಷೆ ಬರೆದು ಫಲಿತಾಂಶ ಪ್ರಕಟವಾದರೂ ಕರೊನಾದಿಂದಾಗಿ ಕಳೆದ ವರ್ಷ ನೇಮಕ ಅಧಿಸೂಚನೆ ರದ್ದಾದ ಬೆನ್ನಲ್ಲೇ 20 ವರ್ಷಗಳಿಂದ ರಾಜ್ಯ ವಿವಿಧ ಇಲಾಖೆಗಳಲ್ಲಿ ಖಾಲಿ ಉಳಿದಿರುವ ಬ್ಯಾಕ್ಲಾಗ್ ಹುದ್ದೆಗಳನ್ನೂ ಭರ್ತಿ ಮಾಡಿಲ್ಲ.
ವಿವಿಧ ಇಲಾಖೆ, ನಿಗಮ ಮಂಡಳಿ, ಸಹಕಾರ ಸಂಸ್ಥೆ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಸರ್ಕಾರ ಈವರೆಗೆ 21,376 ಹುದ್ದೆಗಳನ್ನು ಗುರುತಿಸಿದೆ. ಇದರಲ್ಲಿ 18,706 ಹುದ್ದೆಗಳು ಭರ್ತಿಯಾಗಿದ್ದು, ಉಳಿದ 165 ಹುದ್ದೆಗಳಿಗೆ ಭರ್ತಿಯಿಂದ ವಿನಾಯಿತಿ ನೀಡಲಾಗಿದೆ. ಆದರೆ, 2,505 ಹುದ್ದೆಗಳನ್ನು 2001ರಿಂದ ಈವರೆಗೆ ಭರ್ತಿ ಮಾಡದೆ ಬಾಕಿ ಉಳಿದಿವೆ.
ಉನ್ನತ ಶಿಕ್ಷಣ, ಸಾರಿಗೆ, ವಾಣಿಜ್ಯ, ಸಹಕಾರ, ಆರೋಗ್ಯ ಮತ್ತು ಲೋಕೋಪಯೋಗಿ ಸೇರಿ ಇನ್ನಿತರ ಇಲಾಖೆಗಳಲ್ಲಿ, ನಿಗಮ ಮಂಡಳಿ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಪರಿಶಿಷ್ಟ ಜಾತಿ (ಎಸ್ಸಿ) ಹಾಗೂ ಪರಿಶಿಷ್ಟ ಪಂಗಡ (ಎಸ್ಟಿ) ಅಭ್ಯರ್ಥಿಗಳಿಗೆ ಮೀಸಲಿಟ್ಟಿರುವ 2,505ಕ್ಕಿಂತ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಅಧಿಸೂಚನೆಯನ್ನು ಹೊರಡಿಸಿಲ್ಲ. ಇದರಿಂದ, ಖಾಸಗಿ ಹುದ್ದೆ ತೊರೆದು ಪರೀಕ್ಷೆಗೆ ಸಿದ್ಧತೆ ನಡೆಸಿರುವ ಸಾವಿರಾರು ಅಭ್ಯರ್ಥಿಗಳಿಗೆ ವಯೋಮಿತಿ ಮೀರುವ ಆತಂಕ ಶುರುವಾಗಿದೆ. ಚಾತಕ ಪಕ್ಷಿಯಂತೆ ಕಾಯುತ್ತಿರುವ ನಮ್ಮಂತಹ ಸಾವಿರಾರು ಅಭ್ಯರ್ಥಿಗಳಿಗೆ ಬರ ಸಿಡಿಲು ಬಡಿದಂತಾಗಿದೆ. ಇತ್ತ ಖಾಸಗಿ ಉದ್ಯೋಗ ಸಿಗದೆ ಅತ್ತ ಸರ್ಕಾರಿ ಹುದ್ದೆಯೂ ಸಿಗದೆ ಕಂಗಾಲಾಗಿದ್ದೇವೆ. ಈ ಬಗ್ಗೆ ಸರ್ಕಾರ ಗಮನಹರಿಸಿ ತಕ್ಷಣ ಅಧಿಸೂಚನೆ ಹೊರಡಿಸಬೇಕು ಎಂದು ವಿಜಯಪುರ ಮೂಲದ ಕುಮಾರ್ ಕಾಂಬ್ಳೆ ಮನವಿ ಮಾಡಿದ್ದಾರೆ.
ಯಾವ್ಯಾವ ಇಲಾಖೆ?: ಉನ್ನತ ಶಿಕ್ಷಣ-914, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ-432, ವಾಣಿಜ್ಯ ಮತ್ತು ಕೈಗಾರಿಕೆ-352, ಲೋಕೋಪಯೋಗಿ, ಜಲಸಂಪನ್ಮೂಲ-210, ಸಾರಿಗೆ-178, ಸಹಕಾರ-138, ರೇಷ್ಮೆ-120, ಕೃಷಿ-57, ಆರೋಗ್ಯ-45, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ-42, ನಗರಾಭಿವೃದ್ಧಿ-34, ವೈದ್ಯಕೀಯ-33, ಮಾಹಿತಿ ಮತ್ತು ತಂತ್ರಜ್ಞಾನ-32, ಅರಣ್ಯ-29, ಇಂಧನ-25, ತೋಟಗಾರಿಕೆ-18, ಕನ್ನಡ ಮತ್ತು ಸಂಸ್ಕೃತಿ-13 ವಸತಿ-06, ಒಳಾಡಳಿತ-05, ಪಶುಸಂಗೋಪನೆ -05, ಗ್ರಾಮೀಣಾಭಿವೃದ್ಧಿ-02 ಹುದ್ದೆಗಳು ಖಾಲಿ ಇವೆ.
ಸರ್ಕಾರಗಳು ನಿರ್ಲಕ್ಷ್ಯ: ರಾಜ್ಯದಲ್ಲಿ ಈವರೆಗೆ ಅಧಿಕಾರಕ್ಕೆ ಬಂದ ಎಲ್ಲ ಸರ್ಕಾರಗಳೂ ಬ್ಯಾಕ್ಲಾಗ್ ಹುದ್ದೆಗಳ ಭರ್ತಿಗೆ ನಿರ್ಲಕ್ಷ್ಯವಹಿಸಿವೆ. ಖಾಲಿ ಹುದ್ದೆಗಳನ್ನು ಭರ್ತಿಮಾಡದ ಹಿನ್ನೆಲೆಯಲ್ಲಿ ಆಡಳಿತ ಕೆಲಸಗಳು ಕುಂಟುತ್ತಾ ಸಾಗುತ್ತಿವೆ. ಅಧಿಕ ಕಾರ್ಯಭಾರ ಒತ್ತಡದಿಂದ ಇತರೆ ಸಿಬ್ಬಂದಿಗಳು ರೋಸಿ ಹೋಗಿದ್ದಾರೆ.
ಆರ್ಥಿಕ ನೆಪ ಅಧಿಸೂಚನೆ ರದ್ದು: ಒಂದೆಡೆ 20 ವರ್ಷದಿಂದ ಬ್ಯಾಕ್ಲಾಗ್ ಹುದ್ದೆ ಭರ್ತಿ ಮಾಡದೆ ನಿರ್ಲಕ್ಷ್ಯ ತಾಳಿರುವ ಸರ್ಕಾರ ಕರೊನಾದಿಂದ ಆರ್ಥಿಕ ಸಂಕಷ್ಟ ಮುಂದಿಟ್ಟುಕೊಂಡು ಕಳೆದ ವರ್ಷ ಸರ್ಕಾರದ ವಿವಿಧ ಇಲಾಖೆಗಳು ನೇಮಕಾತಿ ಸಂಬಂಧ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಗೊಳಿಸಿತ್ತು. ಲೋಕೋಪಯೋಗಿ ಇಲಾಖೆ, ಕೆಪಿಟಿಸಿಎಲ್, ಬಿಎಂಆರ್ಸಿಎಲ್, ಕೆಪಿಸಿಎಲ್ ಸೇರಿ ಇನ್ನಿತರ ಇಲಾಖೆಗಳ ಹುದ್ದೆ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಆರ್ಥಿಕ ನಷ್ಟ ಹಾಗೂ ಆಡಳಿತಾತ್ಮಕ ಕಾರಣದಿಂದ ನೇಮಕಾತಿಯನ್ನು ರದ್ದುಪಡಿಸಿತ್ತು.
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ( ಹೆಸ್ಕಾಂ), ಕಲಬುರಗಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ(ಜೆಸ್ಕಾಂ), ಅಲ್ಪ ಸಂಖ್ಯಾತರ ಮತ್ತು ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಖಾಲಿ ಇರುವ ಹಾಸ್ಟೆಲ್ ವಾರ್ಡ್ನ್ ಹಾಗೂ ವಿವಿಧ ವಿಷಯ ಶಿಕ್ಷಕರ ಹುದ್ದೆಗಳ ಅಧಿಸೂಚನೆಯನ್ನು ರದ್ದಾಗಿದೆ. ಅಲ್ಲದೆ, 2017-18ನೇ ಸಾಲಿನಲ್ಲಿ ನಡೆಸಿದ 1,812 ಎಫ್ಡಿಎ ಮತ್ತು ಎಸ್ಡಿಎ ಹುದ್ದೆಗಳ ಪರೀಕ್ಷೆ ಬರೆದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಸರ್ಕಾರ, ನೇಮಕಾತಿ ಆದೇಶವನ್ನೇ ರದ್ದು ಮಾಡಿತ್ತು. ಇದರಿಂದ, ಸರ್ಕಾರಿ ಹುದ್ದೆಗಾಗಿ ಹಲವು ವರ್ಷಗಳಿಂದ ಸಿದ್ಧತೆ ನಡೆಸಿದ್ದ ಲಕ್ಷಾಂತರ ನಿರುದ್ಯೋಗಿಗಳು ಅತಂತ್ರವಾಗಿದ್ದಾರೆ.