ಭೋಪಾಲ್: ಕರೊನಾ ಸಂಕಷ್ಟ ಕಾಲದಲ್ಲಿ ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್, ಆಸ್ಪತ್ರೆಯಲ್ಲಿ ಬೆಡ್, ಆಕ್ಸಿಜನ್ ಸಿಗದೆ ಸಾವಿರಾರು ಮಂದಿ ಸಾಯುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಆಂಬುಲೆನ್ಸ್ ಚಾಲಕರು, ಆಸ್ಪತ್ರೆಗಳು ಹೆಚ್ಚುವರಿ ಹಣ ವಸೂಲಿ ಮಾಡುವ ದಂಧೆಗಿಳಿದಿದ್ದಾರೆ ಎಂಬ ಗಂಭೀರ ಆರೋಪ ದಟ್ಟವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಯುವಕನೊಬ್ಬ ತನ್ನ ಆಟೋವನೇ ಆಂಬುಲೆನ್ಸ್ ಆಗಿ ಪರಿವರ್ತಿಸಿ ಜನರ ಪ್ರಾಣ ಉಳಿಸುವ ಮಹತ್ತರ ಕಾಯಕದಲ್ಲಿ ತೊಡಗಿದ್ದು, ಇತರರಿಗೆ ಮಾದರಿಯಾಗಿದೆ.
ಈ ಆಟೋದಲ್ಲಿ ಆಕ್ಸಿಜನ್ ಸೌಲಭ್ಯವಿದ್ದು, ಕರೊನಾ ಸೋಂಕಿತ ರೋಗಿಗಳು ಸೇರಿದಂತೆ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ಉಚಿತವಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾನೆ ಚಾಲಕ ಮೊಹಮ್ಮದ್ ಜಾವೇದ್. ಈತ ಮಧ್ಯಪ್ರದೇಶದ ಭೋಪಾಲ್ ಮೂಲದವ.
ಆಟೋ ಆಂಬುಲೆನ್ಸ್ ಸೇವೆ ಕುರಿತು ಮಾತನಾಡಿರುವ ಮೊಹಮ್ಮದ್ ಜಾವೇದ್, ಆಂಬುಲೆನ್ಸ್ ಕೊರತೆಯಿಂದಾಗಿ ರೋಗಿಗಳನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲು ಅವರ ಕುಟುಂಬಸ್ಥರು ಪರದಾಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣ ಮತ್ತು ಸುದ್ದಿ ವಾಹಿನಿಗಳಲ್ಲಿ ನೋಡಿದ್ದೇನೆ. ನಾನೇಕೆ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಬಾರದು? ಎಂದು ಚಿಂತಿಸಿ ನನ್ನ ಆಟೋವನ್ನೇ ಆಂಬುಲೆನ್ಸ್ ಮಾಡಿಕೊಂಡಿದ್ದೇನೆ. ಇದಕ್ಕೆ ಅಗತ್ಯ ಹಣ ಹೊಂದಿಸಲು ನನ್ನ ಪತ್ನಿಯ ಚಿನ್ನಾಭರಣ ಮಾರಿದೆ ಎಂದು ಹೇಳಿಕೊಂಡಿದ್ದಾರೆ.